ಸುಳ್ಯ:ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಹಿ ಅವರಿಗೆ ವಕೀಲರೊಬ್ಬರು ಶೂ ಎಸೆದು ಅಪಮಾನ ಮಾಡಿರುವ ಘಟನೆಯನ್ನು ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಮಿತಿ ಹಾಗೂ ಸುಳ್ಯ ತಾಲೂಕು ದಲಿತ ಸಂಘಟನೆಗಳ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಸಾಂಕೇತಿಕ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ಆನಂದ ಬೆಳ್ಳಾರೆ ಮಾತನಾಡಿ ’ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ನೀಡಿದ ಸಂವಿಧಾನದ ಆಧಾರದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯದ ತೀರ್ಪುಗಳು ನಡೆಯುತ್ತಿದೆ. ಇಂತಹ ವ್ಯಕ್ತಿಗಳ ಮೇಲೆ ಶೂ ಎಸೆಯೋ ಮೂಲಕ ಅಪಮಾನ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಮತ್ತು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊಗೇರ ಸೇವಾ ಸಂಘ ರಾಜ್ಯ ಸಮಿತಿಯ ಅಧ್ಯಕ್ಷ ನಂದರಾಜ್ ಸಂಕೇಶ್, ಮುಖಂಡ ಮಹೇಶ್ ಬಳ್ಳಾರ್ಕರ್, ಆದಿ ದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಮಾತನಾಡಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕುವ ಮತ್ತು ಪರಸ್ಪರ ದ್ವೇಷ ಮತ್ತು ಅಶಾಂತಿಯನ್ನು ಹುಟ್ಟು ಹಾಕುವ ವಿಕೃತ ಮನಸ್ಸುಗಳು ಇವತ್ತು ದೇಶದಲ್ಲಿ ವಿಜ್ರಂಬಿಸುತ್ತಿದೆ. ಆದ್ದರಿಂದ ನ್ಯಾಯಾಲಯಕ್ಕೆ ಅಪಮಾನ ಮಾಡಿದ ವಕೀಲರನ್ನು ಕೂಡಲೆ ಬಂಧಿಸಬೇಕು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಸುಳ್ಯ ತಹಸೀಲ್ದಾರ್ ಮೂಲಕ ಆರೋಪಿ ವಕೀಲರಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ವಿಶ್ವನಾಥ ಅಲೆಕ್ಕಾಡಿ, ನಾರಾಯಣ ಎಸ್, ಕೇಶವ ಬಿ.ಎಸ್, ಸತೀಶ, ಅರಿಯಡ್ಕ, ಅಶ್ವಿನ್, ಸತೀಶ್ ಬಿಳಿಯಾರು, ರಮೇಶ್ ಬೂಡು, ಪ್ರಕಾಶ್ ಪಿ ಎಸ್ ಪಾತೆಟ್ಟಿ, ವಿಜಯ್ ಕುಮಾರ್ ಆಲಟ್ಟಿ, ಸದಾನಂದ ಪಿ, ಆನಂದ ಕೆಂಬಾರೆ, ಕುಮಾರ್ ಬಿ, ಹಾಗೂ ಆನಂದ್ ಎಸ್ ಮೊದಲಾದವರು ಭಾಗವಹಿಸಿದ್ದರು.


























