Home ಜಿಲ್ಲೆ ಮಂಗಳೂರು ಸುಧಾಮೂರ್ತಿ, ಜಗ್ಗೇಶ್ ಸೇರಿ ರಾಜ್ಯ ಸಭಾ ಸದಸ್ಯರ ತಂಡ ಸುಳ್ಯದ ವಿವಿಧ ಕಡೆ ಭೇಟಿ

ಸುಧಾಮೂರ್ತಿ, ಜಗ್ಗೇಶ್ ಸೇರಿ ರಾಜ್ಯ ಸಭಾ ಸದಸ್ಯರ ತಂಡ ಸುಳ್ಯದ ವಿವಿಧ ಕಡೆ ಭೇಟಿ

ಸುಳ್ಯ:ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಜ್ಯ ಸಭಾ ಸದಸ್ಯರಾದ ಸುಧಾಮೂರ್ತಿ, ಚಲನಚಿತ್ರ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ರಾಜ್ಯ ಸಭಾ ಸದಸ್ಯರ ತಂಡ ಸುಳ್ಯಕ್ಕೆ ಆಗಮಿಸಿದ್ದರು.
ರಾಜ್ಯ ಸಭೆಯ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸ್ಥಾಯಿ ಸಮಿತಿ ಸದಸ್ಯರ ಭೇಟಿಯ ಭಾಗವಾಗಿ ಸುಧಾಮೂರ್ತಿ ಹಾಗೂ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ತಂಡ ಭೇಟಿ ನೀಡಿದೆ. ಸೋಮವಾರ ಮಡಿಕೇರಿಯಲ್ಲಿ ಸಮಿತಿಯ ಸಭೆ ನಡೆಯಲಿದ್ದು ಇದಕ್ಕೆ ತೆರಳುವ ತಂಡ ಸುಳ್ಯದ ಕೆಲವು ಕಡೆಗಳಿಗೆ ಭೇಟಿ ನೀಡಿದರು. ಅರಂಬೂರಿನ ಶ್ರೀಕೃಷ್ಣ ರಸಪಾಕ ಗ್ರಾಂಡ್ ಹೋಟೆಲ್, ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮತ್ತಿತರ ಕಡೆಗಳಿಗೆ ಭೇಟಿ ನೀಡಿದರು. ರಸಪಾಕಂ ಗ್ರಾಂಡ್ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿ, ಕೆಲ ಹೊತ್ತು ವಿಶ್ರಾಂತಿ ಪಡೆದು ತೆರಳಿದರು. ಸುಧಾಮೂರ್ತಿಯವರು ಅಡ್ಕಾರಿನ ಸುಧಾಕರ ಕಾಮತ್ ಅವರ ಸುಬ್ರಾಯ ಅನಂತ ಕಾಮತ್ & ಸನ್ಸ್ ಗೇರು ಬೀಜ ಫ್ಯಾಕ್ಟರಿಗೆ ಭೇಟಿ ನೀಡಿದರು. ಫ್ಯಾಕ್ಟರಿಯ ಕೆಲಸ ಕಾರ್ಯಗಳ ಬಗ್ಗೆ ಸುಧಾಕರ ಕಾಮತ್, ಪದ್ಮಾವತಿ ಕಾಮತ್, ಶುಭ ಕಾಮತ್ ಅವರು ಸುಧಾಮೂರ್ತಿ ಅವರಿಗೆ ವಿವರಿಸಿದರು. ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಗೂ ಸಂಸದರ ತಂಡ ಭೇಟಿ ನೀಡಿದೆ.
ಮೇ. ೪ರಂದು ಮಡಿಕೇರಿಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ರಾಜ್ಯಸಭಾ ಸ್ಥಾಯಿ ಸಮಿತಿ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿ ಹೆದ್ದಾರಿಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ರಾಜ್ಯ ಸಭಾ ಸದಸ್ಯರಾದ ಸಂಜಯ್ ಕುಮಾರ್ ಝಾ, ಸುಧಾಮೂರ್ತಿ, ಗೊಲ್ಲ ಬಾಬು ರಾವ್, ಜಗ್ಗೇಶ್, ಕೇಸರಿದೇವ್ ಸಿನ್ಹಾ ಝಾಲ, ಸುರೇಂದ್ರ ಸಿಂಗ್ ನಗರ್, ಮಿಲನ್ ಅಲ್ತಾಫ್ ಅಹಮ್ಮದ್, ಆರ್.ಕೆ.ಚೌದರಿ, ತಾಪಿರ್ ಗಾವೊ, ರಾಹುಲ್ ಕಸ್ವಾನ್, ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಶರ್ಮ, ಸುರೇಶ್ ಕುಮಾರ್ ಶೆಟ್ಕರ್, ತಂಗೆಲ್ಲ ಉದಯ್ ಶ್ರೀನಿವಾಸ್ ಮತ್ತಿತರ ಎಂಪಿಗಳು ತಂಡದಲ್ಲಿದ್ದಾರೆ.