ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.31- ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಚರಂಡಿಯಲ್ಲಿ ಜಿಡ್ಡುಗಟ್ಟಿ ನಿಲ್ಲುತ್ತಿರುವ ತ್ಯಾಜ್ಯ ನೀರಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಬೇವಿನಹಳ್ಳಿ ಗ್ರಾಮದಲ್ಲಿ ಹಕ್ಕುಪತ್ರ ಹೊಂದಿರುವ ನಿವೇಶನ ಫಲಾನುಭವಿಗಳಿಗೆ ಇ ಖಾತ ಮಾಡಿಕೊಡಲು ಇರುವ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಎರಡೂ ಗ್ರಾಮಗಳ ನಿವಾಸಿಗಳು ದಸಂಸ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಹಾಗೂ ತಾ.ಪಂ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ಗುರುವಾರ ಎರಡನೇ ದಿನವೂ ಮುಂದುವರೆದಿದ್ದು, ಮತ ಹಾಕಿದ ಜನರ ಬವಣೆಯನ್ನು ನಿರ್ಲಕ್ಷಿಸುತ್ತಿರುವ ಕ್ಷೇತ್ರದ ಶಾಸಕರಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಬೇಜವಾಬ್ದಾರಿ ನಡವಳಿಕೆಯ ವಿರುದ್ಧ ಪ್ರತಿಭಟಿಸಿದರು.
ತಾಲೂಕು ಆಡಳಿತ ಸೌಧದ ರಸ್ತೆಯಲ್ಲಿ ನಿನ್ನೆಯಿಂದ ಪ್ರತಿಭಟನಾ ಧರಣಿ ಕುಳಿತಿದ್ದ ಸುಜ್ಜಲೂರು, ಬೆವಿನಹಳ್ಳಿ ಗ್ರಾಮಸ್ಥರು ಹಾಗೂ ದಸಂಸ ಪದಾಧಿಕಾರಿಗಳು ಎಂದು ತಾಲೂಕು ಕಚೇರಿ ಮುಂಭಾಗದ ಮೆಟ್ಟಿಲುಗಳಲ್ಲಿ ಪ್ರತಿಭಟನೆಯನ್ನು ಮುಂದುವರೆಸಿತಹಸೀಲ್ದಾರ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ, ಆಡಳಿತರೂಢ ಸರ್ಕಾರದ ಜನಪ್ರತಿನಿಧಿಗಳ ನಿರ್ಲಕ್ಷದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ರೂವಾರಿ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಸುಜ್ಜಲೂರು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿದು ಹೋಗದೆ ನಿಂತು ನಿವಾಸಿಗಳ ಬದುಕನ್ನ ಗಬ್ಬೇಳುವಂತೆ ಮಾಡಿದೆ. ಮತ ಕೊಟ್ಟ ಜನರು ಹಲವು ವರ್ಷಗಳಿಂದ ಕೊಳಚೆ ಚರಂಡಿ ನೀರಿನ ಮಧ್ಯೆ ಅಸಹನೀಯ ಜೀವನ ಸಾಗಿಸುತ್ತಿದ್ದರೂ ಜನಪ್ರತಿನಿಧಿಗಳು ಎನಿಸಿಕೊಂಡಿರುವ ಶಾಸಕ ಹಾಗೂ ಸಂಸದರ ಮನೆಗಳಿಗೆ ಅಲೆದರು ಬಗೆಹರಿಯಬಹುದಾದ ಸಮಸ್ಯೆಯನ್ನೇ ಪರಿಹರಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಬೇವಿನಹಳ್ಳಿ ಗ್ರಾಮದಲ್ಲಿ ಅರ್ಹ ನಿವೇಶನ ರಹಿತರನ್ನು ಆಯ್ಕೆಮಾಡಿ ನಿವೇಶನಗಳನ್ನು ಹಂಚಿ 2014 ರಲ್ಲಿಯೇ ಹಕ್ಕುಪತ್ರಗಳನ್ನು ನೀಡಿದ್ದರೂ ಅಷ್ಟು ಫಲಾನುಭವಿಗಳಿಗೆ ಪಟ್ಟಭದ್ರ ಸಮುದಾಯಗಳ ಹಿತಾಸಕ್ತಿ ಇದ್ದೆ ವಿದ್ಯುನ್ಮಾನ ಖಾತೆಯನ್ನು ಮಾಡಿಸಿಕೊಳ್ಳಲಾಗದೆ, ವಸತಿ ಯೋಜನೆ ಅಡಿ ಸ್ವಂತ ಸೂರನ್ನ ಕಟ್ಟಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಎರಡು ಗ್ರಾಮಗಳ ಸಮಸ್ಯೆ ಬಿಗಡಾಯಿಸುತ್ತಿದ್ದರೂ ಪರಿಹರಿಸಲು ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಉಭಯ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಮುಂದಿನ ಬಾರಿ ಬೆಲೆ ತರಬೇಕಾಗುತ್ತದೆ. ಎರಡು ಗ್ರಾಮಗಳ ಸಮಸ್ಯೆ ಪರಿಹಾರವಾಗದಿದ್ದರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಮುಂಭಾಗ ಹೊಟ್ಟೆಗಳನ್ನ ಬಡಿದುಕೊಂಡು, ಆಡಳಿತ ವರ್ಗಕ್ಕೆ ಧೂಳಿಟ್ಟು ಶಾಪ ಹಾಕುವ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಟಿ.ಜಿ.ಸುರೇಶಾ ಚಾರ್ ಹಾಗೂ ತಾ.ಪಂ ಯೋಜನಾಧಿಕಾರಿ ರಂಗಸ್ವಾಮಿ ಆಗಮಿಸಿ ಸುಜ್ಜಲೂರು ಚರಂಡಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ನ್ಯಾಯಾಲಯ ಪ್ರಕರಣ ಗುರುವಾರ ಇತ್ಯರ್ಥವಾದ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಚರಂಡಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸುತ್ತೇವೆ. ಬೇವಿನಹಳ್ಳಿ ನಿವೇಶನ ಹಂಚಿಕೆ ಸಂಬಂಧ ದಾಖಲೆಗಳು ಪತ್ತೆಯಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಇ ಖಾತಾ ಆಗದಿರುವ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರಿಂದ ಎರಡು ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯನ್ನ ಬೆಂಬಲಿಸಿ ದಸಂಸ ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಂ.ಸಂಚಾಲಕ ಶಂಭುಲಿಂಗಸ್ವಾಮಿ, ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಬನ್ನಹಳ್ಳಿಹುಂಡಿ ಉಮೇಶ್, ಬಿಲಿಗೆರೆಹುಂಡಿ ಸಿದ್ದರಾಜು, ಶಾಂತಕುಮಾರ, ರವಿ, ಸುಜ್ಜಲೂರು ಬಸವರಾಜು, ಬಸವಯ್ಯ, ಮಹೇಶ್, ಕುಮಾರ್, ಸಿದ್ದೇಶ, ಶಿವಯ್ಯ, ಮಹದೇವ, ಬೇವಿನಹಳ್ಳಿ ಲತಾ, ಪದ್ಮ ಮಹದೇವಮ್ಮ, ನಂಜಯ್ಯ, ಮರಿನಂಜ, ದೊರೆಸ್ವಾಮಿ ಹಾಗೂ ಇತರರು ಇದ್ದರು.




























