ಸುಂಕಾಸ್ತ್ರಕ್ಕೆ ಮೋದಿ ಕಾರ್ಯತಂತ್ರ

ನವದೆಹಲಿ, ಆ. ೨೮- ಭಾರತದ ಉತ್ಪನ್ನಗಳಿಗೆ ಶೇ. ೫೦ ರಷ್ಟು ತೆರಿಗೆ ವಿಧಿಸುವ ಅಮೆರಿಕಾದ ನಿರ್ಧಾರದಿಂದ ಆಗುವ ಪರಿಣಾಮಗಳನ್ನು ಎದುರಿಸಲು ಭಾರತ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಜಿಎಸ್‌ಟಿ ಕಡಿತ, ಸ್ವದೇಶಿ ಮಂತ್ರ ಜಪ, ರೈತರು ಹಾಗೂ ಸಣ್ಣ ಕೈಗಾರಿಕೆಗಳ ಸಬಲೀಕರಣಗಳಿಗೆ ಒತ್ತು ನೀಡಿದೆ. ಜತೆಗೆ ಸ್ವ ಕೇಂದ್ರೀತ ಆರ್ಥಿಕ ನೀತಿಯ ಮಂತ್ರವನ್ನು ಜಪಿಸಿದೆ.


ಭಾರತದ ಮೇಲೆ ಶೇ. ೫೦ ರಷ್ಟು ಸುಂಕಗಳನ್ನು ಅಮೆರಿಕಾದ ಟ್ರಂಪ್ ಆಡಳಿತ ಬುಧವಾರದಿಂದ ಜಾರಿ ಮಾಡಿದೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮಗಳು ಆಗದಂತೆ ಭಾರತ ತನ್ನದೇ ಆದ ಕಾರ್ಯತಂತ್ರಗಳನ್ನು ರೂಪಿಸಿ, ಆರ್ಥಿಕ ಬೆಳವಣಿಗೆಗಳನ್ನು ಹೆಚ್ಚಿಸಲು ಜಿಎಸ್‌ಟಿ ಪುನರಾಚನೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ.


ಅಮೆರಿಕಾದ ಸುಂಕಾಸ್ತ್ರವನ್ನು ಎದುರಿಸಿ ಭಾರತದ ಆರ್ಥಿಕತೆಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವ ಸಂಬಂಧ ಪ್ರಧಾನಿ ಮೋದಿ ಅವರು ತಮ್ಮ ಆರ್ಥಿಕ ಸಲಹಾ ಮಂಡಳಿಯ ಸಭೆ ನಡೆಸಿ, ಚರ್ಚೆ ನಡೆಸಿದ್ದು, ಟ್ರಂಪ್ ಅವರ ಸುಂಕದ ಬೆದರಿಕೆಗಳನ್ನು ಎದುರಿಸಲು ವ್ಯವಹಾರಗಳನ್ನು ಸುಗಮಗೊಳಿಸಿ ಹೂಡಿಕೆಗಳನ್ನು ಆಕರ್ಷಿಸಲು ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.


ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ರಷ್ಯಾದ ಕಚ್ಚಾತೈಲವನ್ನು ಖರೀದಿಸುವಲ್ಲಿ ತನ್ನ ಕಾರ್ಯತಂತ್ರದ ಸ್ವಾಯತತ್ತೆಯನ್ನು ಕಾಪಾಡುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಹೆಚ್ಚಿನ ಸುಂಕಗಳ ಪರಿಣಾಮಗಳನ್ನು ಎದುರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.


ಭಾರತದಲ್ಲೇ ತಯಾರಾದ ಉತ್ಪನ್ನಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿಸಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಭಾರತ ಹಲವು ಸುಧಾರಣಾ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡಲಿದೆ.


ಆರ್ಥಿಕ ವಿಶ್ವಾಸ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಜಿಎಸ್‌ಟಿ ಪುನಾರಚನೆ ಸೇರಿದಂತೆ ಹಲವು ನೀತಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಕಾರ್ಯಕ್ಕೆ ವೇಗ ನೀಡಿದ್ದು, ಹೂಡಿಕೆಯನ್ನು ಆಕರ್ಷಿಸಲು ಸಂಕೀರ್ಣ ಸುಧಾರಣೆಗಳನ್ನು ಪರಿಹರಿಸಲು ಮುಂದಾಗಿದೆ.


ಜಿಎಸ್‌ಟಿ ಪುನಾರಚನೆ
ಆರ್ಥಿಕತೆಯನ್ನು ಬಲಗೊಳಿಸಲು ಜಿಎಸ್‌ಟಿ ಪುನಾರಚನೆಗೂ ತೀರ್ಮಾನ ಮಾಡಲಾಗಿದ್ದು, ಈಗ ಇರುವ ನಾಲ್ಕು ಹಂತಗಳ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಬದಲಿಸಿ ಎರಡು ಹಂತಗಳ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಜಾರಿ ಮಾಡುವ ಮೂಲಕ ಸ್ವದೇಶಿ ನಿರ್ಮಿತ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಿ ಆರ್ಥಿಕತೆಯನ್ನು ಬಲಗೊಳಿಸುವ ಗುರಿಯನ್ನು ಹೊಂದಲಾಗಿದೆ.


ಪ್ರಸ್ತುತ ಶೇ. ೫, ಶೇ. ೧೨, ಶೇ. ೧೮ ಮತ್ತು ಶೇ. ೨೮ ಹೀಗೆ ನಾಲ್ಕು ಹಂತಗಳ ಜಿಎಸ್‌ಟಿ ಸ್ಲ್ಯಾಬ್ ಇದ್ದು ಇದನ್ನು ಸರಳೀಕರಿಸಿ ಎರಡು ಹಂತಗಳ ಜಿಎಸ್‌ಟಿ ಸ್ಲ್ಯಾಬ್ ರಚಿಸಿ ಶೇ. ೫ ರಿಂದ ಶೇ. ೧೮ ಜಿಎಸ್‌ಟಿ ವಿಧಿಸುವ ಎರಡು ಸ್ಲ್ಯಾಬ್ ಜಾರಿ ಮಾಡಲು ನಿರ್ಧರಿಸಿದೆ.. ಈ ಬಗ್ಗೆ ಬರುವ ಸೆಪ್ಟೆಂಬರ್ ೩ ಮತ್ತು ೪ ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆಯುವ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಎರಡು ಹಂತಗಳ ಜಿಎಸ್‌ಟಿ ಸ್ಲ್ಯಾಬ್‌ಗೆ ಅನುಮೋದನೆ ಪಡೆಯುವ ಸಿದ್ಧತೆಯನ್ನು ಕೇಂದ್ರ ಸರ್ಕಾರ ಮಾಡಿಕೊಂಡಿದೆ.


ಸೆಪ್ಟೆಂಬರ್ ೩ ಮತ್ತು ೪ ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯು ಸಿಮೆಂಟ್, ಟೂತ್‌ಪೆಸ್ಟ್, ಟೂತ್ ಬ್ರಶ್ ಸೇರಿದಂತೆ ನಿತ್ಯ ಬಳಕೆಯ ಹಲವು ವಸ್ತುಗಳ ತೆರಿಗೆಯನ್ನು ಕಡಿಮೆ ಮಾಡುವ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ವಿಮೆಗಳ ಮೇಲೆ ವಿಧಿಸುವ ತೆರಿಗೆ ಕಡಿತ, ಆಹಾರ ಮತ್ತು ಜವಳಿ ಉತ್ಪನ್ನಗಳನ್ನು ಶೇ. ೫ರ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆಯೂ ತೀರ್ಮಾನಗಳನ್ನು ಕೈಗೊಳ್ಳಲಿದ್ದು, ಇದರಿಂದ ದೇಶದಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳ ಮಾರಾಟ ಹೆಚ್ಚಾಗುವ ಜತೆಗೆ ಆರ್ಥಿಕ ಬೆಳವಣಿಗೆಯೂ ವೇಗ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.


ರಾಷ್ಟ್ರೀಯ ಸ್ವಾವಂಬನೆ ಮತ್ತು ಅಭಿವೃದ್ಧಿ ಸಾಧಿಸಲು ನಾಗರಿಕರು ಭಾರತದಲ್ಲೇ ತಯಾರಾಗುವ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ ಮೋದಿ ಅವರು, ಅಂಗಡಿಗಳು ಮತ್ತು ಸರಕು ಮಾರಾಟ ಮಾಡುವ ವ್ಯಾಪಾರಿಗಳು ವಿದೇಶಿ ವಸ್ತುಗಳನ್ನು ಮಾರಾಟ ಮಾಡದೆ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡಿದರೆ ಮೇಕ್ ಇನ್ ಇಂಡಿಯಾ ಆಂದೋಲನಕ್ಕೆ ಭಾರಿ ಉತ್ತೇಜನ ಸಿಗುತ್ತದೆ. ಜತೆಗೆ ಪ್ರತಿಯೊಬ್ಬರು ಭಾರತದ ಸ್ವಾವಬಂಲನೆಗೆ ಸಣ್ಣ ಸಣ್ಣ ಕೊಡುಗೆಗಳನ್ನು ನೀಡಿದಂತಾಗುತ್ತದೆ. ಹಾಗೆಯೇ ಬಾಹ್ಯ ಒತ್ತಡಗಳ ವಿರುದ್ಧ ಭಾರತ ಸದೃಢವಾಗಿ ನಿಲ್ಲಲು ಈ ಉಪಕ್ರಮಗಳು ನೆರವಾಗುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.


ರೈತರು, ಜಾನುವಾರು ಸಾಕಾಣೆದಾರರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿಗಳನ್ನು ಕಾಪಾಡಲು ನಾವು ಬದ್ಧರಿದ್ದೇವೆ. ನಮ್ಮ ಮೇಲಿನ ಒತ್ತಡ ಹೆಚ್ಚಾಗಬಹುದು. ಆದರೆ ಅದನ್ನೆಲ್ಲಾ ಸಮರ್ಥವಾಗಿ ಎದುರಿಸುತ್ತೇವೆ ಎಂದು ಮೋದಿ ಹೇಳುವ ಮೂಲಕ ಟ್ರಂಪ್ ಒತ್ತಡಕ್ಕೆ ಭಾರತ ಮಣಿಯುತ್ತಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.


ಕಳೆದ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಪ್ರಧಾನಿ ಮೋದಿ ಅವರು ಮುಂದಿನ ಪೀಳಿಗೆಗಳ ಸುಧಾರಣೆ ಬಗ್ಗೆ ಮಾನಾಡಿ, ವ್ಯವಹಾರ ಅನುಸರಣೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅನಗತ್ಯ ಶಾಸನಗಳನ್ನು ತೆಗೆದು ಹಾಕಲು ಸುಧಾರಣೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಹೇಳಿ, ಸ್ವ ಕೇಂದ್ರೀತ ಆರ್ಥಿಕ ನೀತಿಗಳ ಬಗ್ಗೆ ಪ್ರಸ್ತಾಪಿಸಿದ್ದರು