
ಸಂಜೆವಾಣಿ ನ್ಯೂಸ್
ಮೈಸೂರು, ಸೆ.03:- ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಪ್ಪಿಸಲು ಗೋದಾಮುಗಳಿಗೆ ಸಿಸಿ ಕ್ಯಾಮರಾ ಮತ್ತು ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಅವರು ಮಾತನಾಡಿದರು.
ರಾಜ್ಯದ ಪ್ರತಿ ಗೋದಾಮುಗಳಲ್ಲೂ ಕೋಟ್ಯಂತರ ರೂ. ಬೆಲೆ ಬಾಳುವ ಆಹಾರ ಪದಾರ್ಥಗಳಿವೆ. ಅವುಗಳ ಭದ್ರತೆಗೆ ಸಿಸಿ ಕ್ಯಾಮರಾ ಹಾಕಲಾಗುವುದು. ಪಡಿತರ ಸಾಗಣೆ ಮಾಡುವ ಲಾರಿಗಳಿಗೆ ಜಿಪಿಎಸ್, ಕೇಂದ್ರ ಕಚೇರಿಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್, ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆದ್ಯತಾ ಪಡಿತರ ಚೀಟಿಗಳನ್ನು (ಬಿಪಿಎಲ್) ಪಡೆಯಲಿರುವ ಮಾನದಂಡಗಳನ್ನು ಪರಿಷ್ಕರಣೆಗೆ ಚಿಂತನೆ ನಡೆಸಿದ್ದೇವೆ.
ದುರುಪಯೋಗ ತಪ್ಪಿಸುವುದು ಸೇರಿದಂತೆ ಹಲವು ಕಾರಣಗಳಿಗೆ ಇತ್ತೀಚೆಗೆ 4.5 ಲಕ್ಷ ಕಾಡ್ರ್ಗಳನ್ನು ರದ್ದುಮಾಡಿತ್ತು. ತೊಂದರೆ ತಪ್ಪಿಸಲು ಅವರಿಗೂ ತಾತ್ಕಾಲಿಕವಾಗಿ ಪಡಿತರ ನೀಡುವಂತೆ ಆದೇಶ ಮಾಡಿದ್ದೇನೆ ಎಂದರು.
ಅನ್ನ ನೀಡುವ ಜವಾಬ್ದಾರಿ:
ರಾಜ್ಯದ 4.50 ಕೋಟಿ ಜನರಿಗೆ ಸೌಲಭ್ಯ ವಿತರಿಸುತ್ತಿರುವ ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ್ದು, ಸ್ವಲ್ಪ ಸಮಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಬೇಕಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಆರಂಭಗೊಂಡು 14 ವರ್ಷಗಳಾಗಿದೆ. ಬಡವರು ಬಿಪಿಎಲ್ ಕಾಡ್ರ್ಗಳು ವಂಚಿತರಾಗಬಾರದು ಮತ್ತು ಯಾರೊಬ್ಬರೂ ಹಸಿವಿನಿಂದ ಮಲಗಬಾರದು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.
ಕಾಳಸಂತೆಗೆ ಪಡಿತರ ಪದಾರ್ಥ:
ನ್ಯಾಯ ಬೆಲೆ ಅಂಗಡಿ ಮೂಲಕ ವಿತರಣೆ ಮಾಡುವ ಆಹಾರ ಪದಾರ್ಥಗಳು ಮತ್ತೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಳೆದ 3 ವರ್ಷಗಳಲ್ಲಿ 1497 ಎಫ್‍ಐಆರ್ ದಾಖಲಿಸಿ 86181 ಕ್ವಿಂಟಾಲ್ ಆಹಾರ ಧಾನ್ಯ ಹಾಗೂ ರೂ. 49.38 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಜೂನ್ 2023ರಿಂದ ಜುಲೈ 31ರವರೆಗೆ ಹೊಸದಾಗಿ 370803 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಾಗಿ ಬಾಕಿ ಇರುವ 130546 ಅರ್ಜಿಗಳ ಪರಿಶೀಲನೆ ಹಾಗೂ ವಿಲೇ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ನುಡಿದರು.
ಇದೇ ವೇಳೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಹಿರಿಯ ಪತ್ರಕರ್ತರಾದ ಟಿ.ವಿ.ರಾಜೇಶ್ವರ್, ಪ್ರಗತಿ ಗೋಪಾಲಕೃಷ್ಣ, ಜಯಂತ್, ಎಂ.ಮಹೇಶ್ ಅವರನ್ನು ಸಚಿವ ರಿಜ್ವಾನ್ ಅರ್ಷದ್ ಅಭಿನಂದಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮಾಂತರ ಉಪಾಧ್ಯಕ್ಷ ದಾ.ರಾ.ಮಹೇಶ್ ಇದ್ದರು.


































