ಬೆಂಗಳೂರು, ಅ. ೫- ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಕಲಬೆರಕೆ ಕೆಮ್ಮಿನ ಔಷಧಿಯಿಂದ ೧೧ ಮಕ್ಕಳು ಮೃತಪಟ್ಟಿರುವ ಬೆನ್ನಲ್ಲೇ ಕರ್ನಾಟದಲ್ಲೂ ರಾಜ್ಯ ಸರ್ಕಾರ ಕಟ್ಟೆಚ್ಚೆರ ವಹಿಸಿದೆ. ಕೋಲ್ಡ್‌ರಿಫ್‌ನ ಸಿರಪ್ ರಾಜ್ಯದಲ್ಲಿ ಸರಬರಾಜು ಆಗುತ್ತಿಲ್ಲವಾದರೂ ಈ ಸಿರಪ್‌ಗಳ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಿರಪ್‌ನ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈ ಔಷಧಿಯಲ್ಲಿ ಯಾವುದಾದರೂ ಕಲಬೆರಕೆ ಅಂಶಗಳು ಪತ್ತೆಯಾದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಿರಪ್‌ನಿಂದ ರಾಜಸ್ತಾನ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕೋಲ್ಡ್‌ರಿಫ್ ಖರೀದಿಸಬಾರದು ಎಂದು ಪೋಷಕರಿಗೆ ಮನವಿ ಮಾಡಿರುವ ಆರೋಗ್ಯ ಇಲಾಖೆ, ವೈದ್ಯರ ಸಲಹೆ ಪಡೆದ ಸಿರಪ್ ಖರೀದಿಸುವಂತೆ ಸೂಚನೆ ನೀಡಿದೆ.
ಈ ಕೆಮ್ಮಿನ ಔಷಧದಲ್ಲಿ ವಿಷಕಾರಿ ಅಂಶವಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯದಲ್ಲೂ ಈ ಔಷಧಿಯ ಮೇಲೆ ನಿಗಾವಹಿಸಲಾಗಿದೆ.
ಮಕ್ಕಳು ಈ ಸಿರಪ್ ಸೇವಿಸಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ರಾಜಸ್ತಾನ ಸರ್ಕಾರಗಳು ಈ ಕೆಮ್ಮಿನ ಔಷಧ ಮಾರಾಟದ ಮೇಲೆ ನಿರ್ಬಂಧ ಹೇರಿವೆ. ತೆಲಂಗಾಣನ ರಾಜ್ಯದಲ್ಲೂ ರಾಜ್ಯ ಸರ್ಕಾರ ಎಚ್ಚರ ವಹಿಸುವಂತೆ ಸೂಚಿಸಿದೆ.
ಈ ಔಷಧ ಸೇವಿಸಿದ ಬಳಿಕ ೬ ರಾಜ್ಯಗಳಲ್ಲಿರುವ ೧೯ ತಯಾರಿಕಾ ಕೇಂದ್ರಗಳಿಗೆ ಆಹಾರ ಸುರಕ್ಷಿತೆ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಔಷಧ ಸೇವನೆಯಿಂದ ಮೂತ್ರಪಿಂಡ ಸೇರಿ ಅಂಗಾಂಗಗಳು ವೈಫಲ್ಯವಾಗಿವೆ. ಮೂರ್ಛೆ ರೋಗ ಬರುವ ಸಾಧ್ಯತೆಯೂ ಇದೆ. ಈ ಔಷಧವನ್ನು ಹೆಚ್ಚಾಗಿ ಸೇವಿಸಿದರೆ ಸಾವಿನ ಪ್ರಮಾಣ ಹೆಚ್ಚಾಗುವುದರ ಜೊತೆ ನರಮಂಡಲ ವೈಫಲ್ಯಕ್ಕೂ ತುತ್ತಾಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಕೋಲ್ಡ್‌ರಿಫ್ ಮೇಲೆ ನಿಗಾವಹಿಸಲಾಗಿದೆ.
ಔಷಧ ಕಂಪನಿಗಳು ಅನುಮತಿಗಿಂತ ಹೆಚ್ಚಾಗಿ ರಾಸಾಯನಿಕ ಅಂಶಗಳನ್ನು ಬಳಸಲಾಗಿದೆ. ಕೆಮ್ಮಿನ ಔಷಧದಲ್ಲಿ ಶೇ. ೦.೧೦ ರಷ್ಟು ಡೈಥೆಲೀನ್ ಗ್ಲೈಕೋಲ್ ಬೆರೆಸಲು ಮಾತ್ರ ಅವಕಾಶವಿದೆ. ಇದನ್ನು ಬೆರೆಸದೆ ಇರುವ ಔಷಧಗಳನ್ನು ಮಾತ್ರ ಹಲವು ದೇಶಗಳು ಸುರಕ್ಷಿತ ಎಂದು ಭಾವಿಸಿದೆ.
ಸಿರಪ್ ಘನಿಕರಿಸುವ ತಡೆಯಲು ಸಿಹಿ ರುಚಿಯನ್ನು ನೀಡಲು ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗಿ ಮಕ್ಕಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಡಾ. ಪ್ರವೀಣ್ ಬಂಧನ
ಮಧ್ಯಪ್ರದೇಶದ ಚಿಂದ್ವಾರದ ಪರಾಸಿಯಾದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳು ಸಾವನ್ನಪ್ಪಿದ ಪ್ರರಕಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಅವರನ್ನು ವಿಶೇಷ ತಂಡ ಬಂಧಿಸಿದೆ.

ಹಲವು ಮಕ್ಕಳ ಸಾವಿಗೆ ಕೋಲ್ಡ್ರಿಫ್ ಕೆಮ್ಮು ಸಿರಪ್ ಕಾರಣ ಎನ್ನುವ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಸಿರಪ್ ಶಿಫಾರಸ್ಸು ಮಾಡಿದ್ದ ವೈದ್ಯನನ್ನು ಬಂಧಿಸಿರುವ ವಿಶೇಷ ಪಡೆ ತನಿಖೆಗೆ ಒಳಪಡಿಸಿದೆ.
ಮಧ್ಯಪ್ರದೇಶದ ಚಿಂದ್ವಾರದಲ್ಲಿ ಅಪ್ರಾಪ್ತ ವಯಸ್ಕರಿಗೆ ವಿಷಕಾರಿ ಸಿರಪ್ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಕ್ಕಳ ತಜ್ಞರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ, ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.
ಪರಾಸಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕಾರಿ ಡಾ. ಅಂಕಿತ್ ಸಲ್ಲಂ ಅವರು ಸಲ್ಲಿಸಿದ ಔಪಚಾರಿಕ ದೂರಿನ ಹಿನ್ನೆಲೆಯಲ್ಲಿ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿಯನ್ನು ಬಂಧಿಸಲಾಗಿದೆ, ಬಂಧಿತ ವೈದ್ಯನ ವಿರುದ್ದ ಭಾರತೀಯ ನ್ಯಾಯ ಸಂಹಿತಾ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, ೧೯೪೦ ರ ಹಲವಾರು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ
ಸೆಕ್ಷನ್ ೨೭೯ (ಔಷಧಗಳ ಕಲಬೆರಕೆ), ಸೆಕ್ಷನ್ ೧೦೫ (ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆ), ಔಷಧಗಳು ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ ೨೭(ಎ) (ಕಲಬೆರಕೆ ಔಷಧಿಗಳ ಬಳಕೆಯಿಂದ ಸಾವಿಗೆ ಕಾರಣವಾದ ಶಿಕ್ಷೆ) ಸೆಕ್ಷನ್ ೨೬ (ನಕಲಿ ಔಷಧಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಅಪರಾಧಗಳು) ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ. ಈ ಅಪರಾಧಗಳಿಗೆ ಭಾರತೀಯ ಕಾನೂನಿನಡಿಯಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
ಬಂಧಿತ ವೈದ್ಯರ ಜೊತೆಗೆ, ಕೋಲ್ಡ್ರಿಫ್ ಸಿರಪ್ ತಯಾರಿಸುವ ಔಷಧ ಕಂಪನಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸಿರಪ್‌ನ ಗುಣಮಟ್ಟ ಮತ್ತು ಸಂಯೋಜನೆ ಕಳಪೆ ಮತ್ತು ವಿಷಕಾರಿಯಾಗಿದೆ ಎಂದು ಪ್ರಯೋಗಾಲಯದ ವರದಿ ಬಹಿರಂಗಪಡಿಸಿದೆ.
ಕಾಂಚೀಪುರಂನಲ್ಲಿರುವ ತಮಿಳುನಾಡು ಮೂಲದ ಕಂಪನಿಯಾದ ಮೆಸರ್ಸ್ ಸ್ರೇಸನ್ ಫಾರ್ಮಾಸ್ಯುಟಿಕಲ್ ಕಂಪನಿ ವಿರುದ್ದವೂ ಪ್ರಕರಣ ದಾಖಲು ಮಾಡಲಾಗಿದೆ.

























