ಸಿದ್ದಾಪುರದ ಹೊಸಂಗಡಿಯಲ್ಲಿ ಒಂಟಿ ಕಾಡಾನೆ ಪ್ರತ್ಯಕ್ಷ; ಶಾಲೆಗಳಿಗೆ ರಜೆ, ವಾರದ ಸಂತೆ ರದ್ದು

ಕುಂದಾಪುರ- ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ ೪ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರೌಢಶಾಲೆಗಳವರೆಗೆ ಜೂನ್ ೪ರಂದು ರಜೆ ಘೋಷಿಸಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬುಧವಾರ ನಡೆಯಬೇಕಿದ್ದ ವಾರದ ಸಿದ್ದಾಪುರ ಸಂತೆಯನ್ನು ರದ್ದುಗೊಳಿಸಲಾಗಿದೆ.
ಆಗುಂಬೆಯಿಂದ ೩೦ ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಸತತ ೨ ದಿನಗಳಿಂದ ಆನೆ ಸಂಚರಿಸುತ್ತಿದೆ. ಈಗಾಗಲೇ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಇನ್ನು ಆನೆ ತಡೆ ಪಡೆ, ಅರಣ್ಯ ಇಲಾಖೆ, ವನ್ಯಜೀವಿ ವಲಯ ಅಧಿಕಾರಿ, ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾಡಾನೆ ಸಂಚಾರದ ಮಾಹಿತಿ ಪಡೆಯುತ್ತಿದ್ದಾರೆ. ಹೆಚ್ಚಿನ ಕಾರ್ಯಾಚರಣೆಗೆ ಕುಮ್ಮಿ ಆನೆಗಳನ್ನು ತರಿಸಿ ಸೆರೆ ಹಿಡಿಯಲು ಸಿದ್ಧತೆ ನಡೆಸಲಾಗಿದೆ. ಇನ್ನು ಕಂದಾಯ ಇಲಾಖೆ, ಕುಂದಾಪುರ ತಾಲೂಕು ಆಡಳಿತವೂ ಕಾಡಾನೆ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕು ಎಂದು ಸೂಚನೆ ನೀಡಿದೆ.
ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆಬರೆಘಾಟಿ ರಸ್ತೆಯಲ್ಲಿ ಗಂಡು ಕಾಡಾನೆ ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ನಡೆದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಬಂದಿದೆ. ಆನೆ ರಸ್ತೆಯಲ್ಲಿ ಓಡಾಡುತ್ತಿದ್ದ ವಿಡಿಯೋವನ್ನು ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್‌ನ ಸಿಬ್ಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹಾಸನ ಕಾಡಿನ ಸುಮಾರು ೧೨ ವರ್ಷ ಪ್ರಾಯದ ಗಂಡು ಆನೆಯು ಕಾರಿಡಾರ್‌ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ದಾರಿ ತಪ್ಪಿ, ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎನ್ನಲಾಗಿದೆ.