
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.10- ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಆರ್.ಎನ್. ಸಿದ್ದಲಿಂಗಸ್ವಾಮಿ ಅಧ್ಯಕ್ಷರಾಗಿ, ಪ್ರಸಾದ್ ಲಕ್ಕೂರು ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಚುನಾವಣೆಯ ಎಲ್ಲಾ 25 ಸ್ಥಾನಗಳಿಗೂ ಸಿದ್ದಲಿಂಗಸ್ವಾಮಿ ಬಣದವರೇ ಆಯ್ಕೆಯಾಗುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಲಿಂಗ ಸ್ವಾಮಿ 85 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ದೇವರಾಜು ಕಪ್ಪಸೋಗೆ 61 ಮತಗಳನ್ನು ಪಡೆದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 146 ಮತಗಳು ಚಲಾವಣೆಯಾಗಿದ್ದವು.
ರಾಜ್ಯ ಸಮಿತಿ ಸದಸ್ಯರಾಗಿ ಮಹೇಂದ್ರ ಗೊರುಕನ, ಖಜಾಂಚಿಯಾಗಿ ಆರ್.ಸಿ. ಪುಟ್ಟರಾಜು, ಉಪಾಧ್ಯಕ್ಷರಾಗಿ ಹೆಚ್.ಎಸ್. ಚಂದ್ರಶೇಖರ್, ಪ್ರಸಾದ್ ಬದನಗುಪ್ಪೆ, ಡಿ.ನಟರಾಜು ಕೊಳ್ಳೇಗಾಲ, ಕಾರ್ಯದರ್ಶಿಗಳಾಗಿ ಕೆ.ಎಸ್. ಫಾಲಲೋಚನ ಆರಾಧ್ಯ, ಯರಿಯೂರು ನಾಗೇಂದ್ರ, ಅಮಚವಾಡಿ ರಾಜೇಂದ್ರ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ರಹಾಂ ಡಿ ಸಿಲ್ವಾ, ಎಸ್.ಎಂ. ನಂದೀಶ್, ಪ್ರಕಾಶ್ ಬೆಲ್ಲದ್, ಮಲ್ಲಪ್ಪ, ರಾಜಶೇಖರ್, ಎಂ. ಮರಿಸ್ವಾಮಿ ವಿಜಯಕುಮಾರ್, ಬಸವರಾಜು ಸುದ್ದಿಸಂಜೆ, ಮಡಹಳ್ಳಿ ಮಹೇಶ್, ಬಿಳಗಿರಿ ಶ್ರೀನಿವಾಸ್, ಹೊಮ್ಮ ನಂಜುಂಡನಾಯಕ, ದೊ.ರಾ.ಪೇಟೆ ಪುರುμÉೂೀತ್ತಮ್, ವೈ.ಎಂ. ಭಾನುಪ್ರಕಾಶ್, ಬದನಗುಪ್ಪೆ ಮಲ್ಲಣ್ಣ, ಎಂ. ಮಲ್ಲೇಶ್ ಚುನಾಯಿತರಾದರು.
ಇದೇ ಮೊದಲ ಬಾರಿಗೆ ಮತದಾನ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇದೇ ಮೊದಲ ಬಾರಿ ಮತದಾನ ನಡೆಯಿತು. ಕಳೆದ ಮೂರು ದಶಕಗಳಿಂದಲೂ ಜಿಲ್ಲಾ ಸಂಘಕ್ಕೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿ ಮತದಾನ ನಡೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಜಿಲ್ಲೆಯ ಎಲ್ಲ ತಾಲೂಕುಗಳ ಪತ್ರಕರ್ತರೂ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪತ್ರಕರ್ತರ ಭವನದಲ್ಲಿ ಮತ ಚಲಾಯಿಸಿದರು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಮತ ಎಣಿಕೆ ನಡೆಯಿತು,
ಪತ್ರಿಕಾ ವಿತರಕ ಅಧ್ಯಕ್ಷರಾಗಿ ಆಯ್ಕೆ : ಇದೇ ಮೊದಲ ಬಾರಿಗೆ ಅಧ್ಯಕ್ಷರಾಗಿ ಭರ್ಜರಿ ಜಯಗಳಿಸಿದ ಸಿದ್ದಲಿಂಗಸ್ವಾಮಿ ಮುಂಚಿನಿಂದಲೂ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ಮಿತ್ರ ಜಿಲ್ಲಾ ವರದಿಗಾರನಾಗಿದ್ದರೂ, ಪ್ರಸ್ತುತ ಹಲವು ಪತ್ರಿಕೆಗಳ ವಿತರಕರಾಗಿ ಪ್ರತಿದಿನ ಮುಂಜಾನೆ ಪತ್ರಿಕೆಗಳ ವಿತರರಣೆ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು, ಪ್ರಸ್ತುತ ಸಾಲಿಗೆ ಅಧ್ಯಕ್ಷರಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಅನುಭವಿ ಪತ್ರಕರ್ತ ದೇವರಾಜು ಕಪ್ಪಸೋಗೆ ಅವರನ್ನು ಸೋಲಿಸುವ ಮೂಲಕ ಅಧ್ಯಕ್ಷಗಾದಿಗೆ ಏರಿದ್ದಾರೆ.
ಚುನಾವಣಾಧಿಕಾರಿಗಳಾಗಿ ನಿವೃತ್ತ ಸರ್ಕಾರಿ ಅಧಿಕಾರಿಗಳಾದ ದೊರೆಸ್ವಾಮಿ ಹಾಗೂ ಗೌರಿಶಂಕರ್ ಅವರು ಕರ್ತವ್ಯ ನಿರ್ವಹಿಸಿದರು.




























