ಸಂಜೆವಾಣಿ ನ್ಯೂಸ್
ಮೈಸೂರು: ಜೂ.13:- ಇನ್ನು ಆರು ತಿಂಗಳಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುವುದಿಲ್ಲ. ಈ ಸಂಬಂಧ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಗ್ರಿಮೆಂಟ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಪ್ಪಂದ ಆಗಿರುವುದು ನೋಟರಿ ಬಳಿಯಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ (ಕಾಂಗ್ರೆಸ್ ಹೈಕಮಾಂಡ್). ಮುಖ್ಯಮಂತ್ರಿ ಬದಲಾವಣೆ ಎಂಬುದು ಒಪ್ಪಂದವಲ್ಲ. ಅಗ್ರಿಮೆಂಟ್ ಆಗಿದೆ. ಅದು ನೋಟರಿಯಲ್ಲಿ ಅಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ. ಕಳೆದ ಬಾರಿ ಬಜೆಟ್ ವೇಳೆಯೂ ಮುಂದಿನ ಬಾರಿ ಯಾರು ಬಜೆಟ್ ಮಂಡಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದಾಗ ನಕ್ಕು ಕಾಂಗ್ರೆಸ್ ಸಿಎಂ ಎಂದು ಉತ್ತರ ನೀಡಿದ್ದರು. ಇಷ್ಟು ಸಾಕಲ್ಲವೇ ಸಿಎಂ ಬದಲಾವಣೆ ಸುಳಿವಿಗೆ ಎಂದರು.
ಅಂಥವರು ನಮ್ಮ ಕೇಂದ್ರ ಸರ್ಕಾರಕ್ಕೆ ಅಂಕ ಕೊಡುವುದನ್ನು ನಾವಾಗಲಿ ಜನರಾಗಲಿ ನಿರೀಕ್ಷಿಸುದಿಲ್ಲ. ಏಕೆಂದರೆ, ಅವರು ಇರುವುದೇ ಗ್ಯಾರಂಟಿ ಇಲ್ಲ. ಶೀಘ್ರದಲ್ಲೇ ನಿರ್ಗಮಿತ ಸಿಎಂ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ 2 ವರ್ಷದ ಸಾಧನೆಗೆ ನಾವು ಶೂನ್ಯ ಅಂಕವನ್ನೂ ನೀಡಲಾಗುವುದಿಲ್ಲ. ಮೈನಸ್ ಅಂಕ ಕೊಡಬೇಕಷ್ಟೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಸಚಿವರು ಗೃಹಕ್ಕಷ್ಟೆ ಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ, ಯಾವ ನೀರಾವರಿ ಯೋಜನಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ? ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದಾರೆಯೇ? ಮೈಸೂರು ಭಾಗದ ನಾಲೆಗಳ ಹೂಳೆತ್ತಿಸಿದ್ದಾರೆಯೇ? ಏನು ಮಾಡಿದ್ದೇನೆ ಎಂಬುದನ್ನು ಧೈರ್ಯವಾಗಿ ಹೇಳಲಿ ಎಂದು ಸವಾಲು ಹಾಕಿದರು.
ನಾನು ಪ್ರಧಾನಿ ಆಕಾಂಕ್ಷಿ ಎಂದು ನಮ್ಮಲ್ಲಿ ಯಾರಾದರೂ ಹೇಳಿದ್ದಾರೆಯೇ? ಆದರೆ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಲೇ ಇದ್ದಾರೆ. ಸಚಿವರೇಕೆ ಶಾಸಕರೂ ಆ ಮಾತನಾಡುತ್ತಿದ್ದಾರೆ. ಕುರ್ಚಿ ಗಟ್ಟಿ ಇದ್ದಿದ್ದರೆ ಇತರರೆಲ್ಲಾ ಏಕೆ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದರು. ಖಾಲಿ ಇರುವುದರಿಂದಲೇ ಅರ್ಜಿ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇವರ ಗಲಾಟೆಯಿಂದಾಗಿಯೇ ನೆಗೆದು ಬೀಳುತ್ತಾರೆ. ನಾವೇನೂ ಸರ್ಕಾರ ಬೀಳಿಸುವುದಿಲ್ಲ. ಅವರೇ ವಿಲವಿಲ ಒದ್ದಾಡುತ್ತಿದ್ದಾರೆ. ಸರ್ಕಾರ ಬಿದ್ದಾಗ ಸುಮ್ಮನಿರುವುದಕ್ಕೆ ನಾವೇನೂ ಸನ್ಯಾಸಿಗಳಲ್ಲ ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಸರಿ ಇದ್ದಿದ್ದರೆ, ಆರ್‍ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೆ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ ಎಂದು ಮೊದಲ ದಿನವೇ ಹೇಳುತ್ತಿದ್ದರು ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಸುದ್ದಿಗೋಷ್ಠಿಯನ್ನೇ ನಡೆಸುವುದಿಲ್ಲ ಎಂದರೆ ಏನರ್ಥ. ಅವರು ಕೆಲಸ ಮಾಡಿ, ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಸಿದ್ದರಾಮಯ್ಯ ಅವರಂತೆ ಸುದ್ದಿಗೋಷ್ಠಿ ಮಾಡಿ ಕಾಲ್ತುಳಿತಕ್ಕೆ ಕಾರಣ ನಾನಲ್ಲ, ನಾನವನಲ್ಲ ಎನ್ನಬೇಕೆ 2ಜಿ, ಕೋಲ್ಜಿಯಂ ಮುಂತಾದ ಯಾವ ಹಗರಣವಾಗಿದೆ ಸುದ್ದಿಗೋಷ್ಠಿ ಕರೆಯಲು ಎಂದರು.
ಪ್ರತಿ ಪಕ್ಷವಾಗಿ ಬಿಜೆಪಿಯ ಎದುರೇಟಿಗೆ ಈಗಾಗಲೇ ಅವರು ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳುವಂತೆ ಕಾಲ್ತುಳಿತ ಪ್ರಕರಣವನ್ನು ಬಿಜೆಪಿಯವರೇ ದೊಡ್ಡದು ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಂದರೆ ನಾವು ದೊಡ್ಡದು ಮಾಡದಿದ್ದರೆ ಇವರು ಮುಚ್ಚಿ ಹಾಕುತ್ತಿದ್ದರಲ್ಲವೇ ಎಂದು ಪ್ರಶ್ನಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ ಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇದ್ದರು.