ಸಿದ್ದರಾಮಯ್ಯಗೆ ಅಹಿಂದ ಬೆಂಬಲ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.25:-
ಸಿದ್ದರಾಮಯ್ಯ ಅವರನ್ನು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂಬ ಒತ್ತಾಯದೊಂದಿಗೆ ಜ.25ರಂದು ಅಹಿಂದ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.


ಅಹಿಂದ ಮೈಸೂರು ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಹಲವು ಸಮುದಾಯಗಳ ಮುಖಂಡರು ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮಾತನಾಡಿದರು.


ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಪರವಾಗಿ ಸಿದ್ದರಾಮಯ್ಯ ಬದ್ಧತೆ ಹೊಂದಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ವಸ್ತು ಪ್ರದರ್ಶನದ ಪ್ರಾಧಿಕಾರದ ಆವರಣದಲ್ಲಿ ಅಹಿಂದ ಸಮಾವೇಶ ನಡೆಸಲು ಸಭೆ ತೀರ್ಮಾನಿಸಿತು.
ಪ್ರಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಧ್ಯಕ್ಷ ಕೆ.ಎಸ್.ಶಿವರಾಮು, ರಾಜ್ಯದ ಜನಸಂಖ್ಯೆಯಲ್ಲಿ ಶೇ.65ರಿಂದ 70ರಷ್ಟು ಅಹಿಂದ ಸಮುದಾಯವಿದೆ. ಇದುವರೆಗೆ 23 ಮಂದಿ ಮುಖ್ಯಮಂತ್ರಿಯಾಗಿದ್ದು, ಅಹಿಂದ ಸಮುದಾಯದವರಿಗೆ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ, ಧರ್ಮಸಿಂಗ್ ಅವರಿಗೆ ಅಲ್ಪಾವಧಿಗೆ ಅವಕಾಶ ದೊರಕಿದೆ. ಇದೀಗ ಅಹಿಂದ ಸಮುದಾಯಗಳಿಗೆ ತಂದೆ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಇದನ್ನು ಖಂಡಿಸಿ ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದು, ಸುಮಾರು 15ರಿಂದ 20 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.


ಹಿರಿಯ ಪತ್ರಕರ್ತ ಟಿ.ಗುರುರಾಜ್ ಮಾತನಾಡಿ, ಸಿದ್ದರಾಮಯ್ಯ ಅವರು ಲೋಹಿಯಾವಾದಿ, ಸಮಾಜವಾದಿ ಎಂಬುದೆಲ್ಲವನ್ನೂ ಮೀರಿ ಅವರೊಬ್ಬ ಜನಪರ, ಜೀವಪರವಾದ ನಾಯಕ. ಮರಳಿನ ಮೇಲೆ ಅಕ್ಷರ ಬರೆಯುತ್ತಿದ್ದ ಹುಡುಗನೊಬ್ಬ ವಿಧಾನಸೌಧದ ಶಕ್ತಿಪೀಠದವರೆಗೆ ಸಾಗಿ ಬರುವುದು ಎಂದರೆ ಕಡಿಮೆ ಸಾಧನೆಯಲ್ಲ. ಇದೆಲ್ಲವೂ ಸುಖಾಸುಮ್ಮನೆ ಸಾಧ್ಯವಾಗಿಲ್ಲ. ಅಹಿಂದ ಸಮುದಾಯಗಳ ಬಗ್ಗೆ ಅವರಿಗೆ ಇರುವ ಬದ್ಧತೆಯಿಂದಾಗಿ ದೇಶದಲ್ಲೇ ಅಪರೂಪದ ನಾಯಕನಾಗಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
ಕುರುಬ, ಉಪ್ಪಾರ, ಮಡಿವಾಳ, ಗಾಣಿಗ, ವಿಶ್ವಕರ್ಮ ಮುಂತಾದ ಸಮುದಾಯಗಳ ಮುಖಂಡರು, ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗಗಳ ಪದಾಧಿಕಾರಿಗಳು ಮಾತನಾಡಿ ಬೆಂಬಲ ಸೂಚಿಸಿದರು.


ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ:
ಕೋಮುವಾದಿ ಶಕ್ತಿಗಳು, ಕೆಲ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಮುಖಂಡ ಕೆ.ಎಸ್.ಶಿವರಾಮು ಆರೋಪಿಸಿದರು.
ಸಿದ್ದರಾಮಯ್ಯ ಅವರು ಕೋಮು ಶಕ್ತಿಗಳಿಗೆ ತಡೆಗೋಡೆ ರೂಪದಲ್ಲಿ ಇದ್ದಾರೆ. ಹೇಗಾದರೂ ಮಾಡಿ ಗೋಡೆಯನ್ನು ಕೆಡವಿ ಹಾಕಬೇಕು ಎಂದು ಕೋಮುವಾದಿ ಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಅವರೊಂದಿಗೆ ಸೇರಿ ಕಾಂಗ್ರೆಸ್ ನಾಯಕರೂ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದೂರಿದರು.


ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಜಾರಿಗೊಳಿಸಲು ಬಿಡಲಿಲ್ಲ. ಎರಡನೇ ಅವಧಿಯಲ್ಲೂ ಕಾಂಗ್ರೆಸ್ ನಾಯಕರೇ ಇನ್ನಿಲ್ಲದ ಕೊಂಕು ತೆಗೆದು ವರದಿ ಜಾರಿ ಮಾಡದಂತೆ ತಡೆದರು. ಇದೀಗ ಹೊಸದಾಗಿ ಜಾತಿ ಗಣತಿ ಮಾಡಿಸಲಾಗಿದೆ. ಅದು ಜಾರಿಯಾದರೆ ಅಹಿಂದ ಸಮುದಾಯಗಳಿಗೆ ನ್ಯಾಯ ದೊರಕಲಿದ್ದು, ಅಲ್ಲಿವರೆಗೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಯೋಗೇಶ್ ಉಪ್ಪಾರ, ಬಿ.ಶಿವಣ್ಣ, ಗೋಪಾಲಕೃಷ್ಣ, ಬಸವರಾಜು, ಪ್ರಭು, ಮಂಜು ಶೆಟ್ಟಿ, ನಾಗೇಶ್, ಯೋಗೇಂದ್ರ, ಬಿ.ಮಂಜುನಾಥ್, ಹರೀಶ್, ಮಾರ ಮುಂತಾದವರಿದ್ದರು.