ಸಿದ್ದಗಂಗಾ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಟ್ಟು ಗೌರವಿಸಲಿ: ಹೆಳವರಹುಂಡಿ ಸಿದ್ದಪ್ಪ

ಸಂಜೆವಾಣಿ ವಾರ್ತೆ
ತಿ.ನರಸೀಪುರ. ಜ.23
– ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿಯಾಗಿದ್ದು, ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನವನ್ನು ಕೊಟ್ಟು ಗೌರವಿಸಬೇಕೆಂದು ಎಂದು ಡಾ.ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ಒತ್ತಾಯಿಸಿದರು.


ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಗುರುವಾರ ಡಾ.ಶಿವಕುಮಾರಸ್ವಾಮಿಯವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ದಾಸೋಹ ದಿನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿವಕುಮಾರ ಸ್ವಾಮೀಜಿಯವರು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಜಾತಿ, ಧರ್ಮ ಬೇಧಭಾವವನ್ನು ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಅನ್ನ, ವಸತಿ, ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರುಎಂದು ಸ್ಮರಿಸಿದರು.
ಶಿವಕುಮಾರ ಸ್ವಾಮೀಜಿಗಳು ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಅವರು 111 ವರ್ಷಗಳ ತುಂಬು ಜೀವನ ನಡೆಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಕರ್ಯ ಕಲ್ಪಿಸಿದರು ಎಂದು ಹೇಳಿದರು.


ಜಾಗತಿಕವಾಗಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀಗಳು 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು ನಿರಂತರವಾಗಿ ಶ್ರಮಿಸಿದ ಶ್ರಮಯೋಗಿ. ಯಾವುದೇ ಮತ, ಧರ್ಮಕ್ಕೆ ಸೀಮಿತವಾಗದೆ ಜಾತ್ಯಾತೀತವಾಗಿ ಬದುಕಿ ಬಸವಣ್ಣನ ಮಾದರಿಯಲ್ಲಿ ಸಮಾಜದಲ್ಲಿ ಸಮಾನತೆಯ ದೀವಿಗೆ ಬೆಳಗಿದ ಮಹಾನ್ ಆದರ್ಶವಾದಿಯಾದ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು. ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ ಮಾತನಾಡಿ, ಶಿವಕುಮಾರಸ್ವಾಮಿಯವರು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿಯಾಗಿದ್ದರು ಎಂದರು.
ಕೆಇಬಿ ನಿವೃತ್ತ ನೌಕರ ಸಿದ್ದಲಿಂಗಸ್ವಾಮಿ ಮಾತನಾಡಿ, ನ್ಬಸವಣ್ಣರ ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆಯಿಟ್ಟಿದ್ದ ಶ್ರೀಗಳು ತ್ರಿವಿಧ ದಾಸೋಹದಲ್ಲಿ ಧರ್ಮ, ಜಾತಿ, ಮತದ ಬೇಧವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಲಕ್ಷಾಂತರ ಮಂದಿಯ ಹಸಿವು ನೀಗಿಸಿ ಸಮಾಜದ ಉಳಿವಿಗೆ ಜ್ಞಾನ ಗಂಗೆ ಹರಿಸಿದರು. ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ, ಉತ್ತಮ ಸಮಾಜಕ್ಕೆ ಬದುಕು ಕಲ್ಯಾಣವಾಗಲು ಶಿವಕುಮಾರ ಸ್ವಾಮೀಜಿರವರು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ಎಲ್ಲರು ಸಾಗಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಸೋಮಣ್ಣ ಸಹ ಕಾರ್ಯದರ್ಶಿ ವಾಟಾಳು ಗುರುಪಾದ, ಸಂಚಾಲಕರಾದ ಅದೃಷ್ಟ ಮಾದಪ್ಪ, ಹೆಳವರಹುಂಡಿ ಬಸಪ್ಪ, ದೊಡ್ಡನಹುಂಡಿ ಲೋಕೇಶ್, ಕೇಬಲ್ ರಾಜಶೇಖರ್, ಕಾರ್ ಮಲ್ಲಪ್ಪ, ಪರಮೇಶ್ ಪಟೇಲ್, ಖಜಾಂಚಿ ಮಾಯಪ್ಪ, ಗೌರವ ಸಲಹೆಗಾರರಾದ ಕಾವೇರಿಪುರ ಸುರೇಶ್, ಹೇಳವರಹುಂಡಿ ಮೂರ್ತಿ, ಮುಡುಕನಪುರ ನಾಗಭೂಷಣ್, ಕೆಬ್ಬೇಹುಂಡಿ ಶಿವಕುಮಾರ್ , ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಿರ್ದೇಶಕ ಎಸ್.ಬಿ.ಸುಗಂಧರಾಜು, ಪೂಜಿತ್ ಮೆಡಿಕಲ್ಸ್ ಕುಮಾರ್, ಗ್ರಾ.ಪಂ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಮುಖಂಡರಾದ ಅಕ್ಕಿ ನಾಗಪ್ಪ, ಡಿ.ಎಲ್.ಮಹದೇವಪ್ಪ, ಆರ್.ಗಿರೀಶ್, ಬಿ.ಪಿ.ಪರಶಿವಮೂರ್ತಿ, ಸಾಲೂರು ಸ್ವಾಮಿ, ರಾಜಶೇಖರ್, ಮತ್ತಿತರರಿದ್ದರು.