ಸಿಡಿಮದ್ದಿನ ಶಬ್ದಕ್ಕೆ ಬೆದರದ ಗಜಪಡೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.20:-
ಗಜಪಡೆ ಹಾಗೂ ಅಶ್ವದಳಕ್ಕೆ ಭಾರಿ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಗಜಪಡೆ ಸ್ವಲ್ಪವೂ ಅಂಜದೆ ಧೈರ್ಯ ಪ್ರದರ್ಶಿಸಿದರೆ, ಅಶ್ವಪಡೆಯ ಕೆಲ ಕುದುರೆಗಳು ಬೆಚ್ಚಿದವು.


ನಗರದ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಶುಕ್ರವಾರ ಬೆಐಗ್ಗೆ 9.30ಕ್ಕೆ ಕುಶಾಲತೋಪಿನ ಎರಡನೇ ತಾಲೀಮು ಯಶಸ್ವಿಯಾಗಿ ನಡೆಯಿತು. ಫಿರಂಗಿಗಳಿಂದ ಸಿಡಿದ ಕುಶಾಲತೋಪಿಗೆ ಅನುಭವಿ ಆನೆಗಳು ಅಂಜಲಿಲ್ಲ. ಕ್ಯಾಪ್ಟನ್ ಅಭಿಮನ್ಯು, ಮಹೇಂದ್ರ, ಏಕಲವ್ಯ ಧ್ಯಾನಸ್ಥರಾಗಿದ್ದರು. ಮೊದಲು ಬೆದರಿದವರಿಗೆ ಒತ್ತಾಸೆಯಾಗಿ ನಿಂತ ದೃಶ್ಯ ಅನುಭವತೆ ಸಾರಿತು. ಮೊದಲ ತಾಲೀಮಿನಲ್ಲಿ ಹೆದರಿದ್ದ ಶ್ರೀಕಂಠ ಮತ್ತು ಹೇಮಾವತಿ ಆರಂಭದಲ್ಲಿ ಸ್ವಲ್ಪ ಬೆಚ್ಚಿದ್ದರು. ಅನುಭವಿಗಳು ಅವರನ್ನು ಸಮಾಧಾನಿಸಿದ ಬಗೆ ತಂಡದ ಸಾಂಘಿಕ ಸ್ಫೂರ್ತಿ ಸಾರಿತು.


ಜಂಬೂಸವಾರಿಗೆ 13 ದಿನವಷ್ಟೇ ಇದ್ದು, ಗಜಪಡೆ ಹಾಗೂ ಅಶ್ವಪಡೆ ಸಜ್ಜುಗೊಳಿಸುವ ಪ್ರಕ್ರಿಯೆ ಬಿರುಸಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಸಿದ್ದನಗೌಡ ಪಾಟೀಲ್, ಎಸಿಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಫಿರಂಗಿ ದಳದ 35 ಸಿಬ್ಬಂದಿ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ 21 ಸಿಡಿಮದ್ದು ಹಾರಿಸಿದರು.


ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿ ಹಾಕಿ, ಬೆಂಕಿ ತಾಕಿಸಿದೊಡನೆ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನನಾರಿನಲ್ಲಿ ಮಾಡಿರುವ ಸಿಂಬವನ್ನು ಬ್ಯಾರಲ್‍ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿದರು.
ಏಕಾಏಕಿ ಭಾರಿ ಪ್ರಮಾಣದ ಶಬ್ದ ಕೇಳಿದರೆ ಗಜಪಡೆ ಹಾಗೂ ಅಶ್ವಪಡೆ ಮತ್ತೆ ಆತಂಕಕ್ಕೀಡಾಗುವುದರಿಂದ ತಾಲೀಮಿಗೂ ಮುನ್ನ ಆನೆಗಳ ಮುಂದೆ ಆಟಂಬಾಂಬ್ ಸಿಡಿಸಿ ಪ್ರಯೋಗ ಮಾಡಲಾಯಿತು. ಪಟಾಕಿ ಸಿಡಿತದ ಶಬ್ದಕ್ಕೆ ಒಗ್ಗಿಕೊಂಡವು. ಆ ನಂತರ ಸಿಡಿಮದ್ದು ಸಿಡಿಸಲಾಯಿತು. ಸದ್ದಿಗೆ ಬೆಚ್ಚುವ ಧನಂಜಯನೂ ಅಲುಗಾಡಲಿಲ್ಲ.


ಬೆದರಿದ 6 ಕುದುರೆ: 35 ಕುದುರೆಗಳಲ್ಲಿ 6 ಕುದುರೆಗಳು ಬೆದರಿ ನಿಯಂತ್ರಣ ಕಳೆದುಕೊಂಡವು. ಅದರಲ್ಲೂ ಎರಡು ಕುದುರೆಗಳು ಕಾಂಪೌಂಡ್ ಕಡೆ ತೆರಳಿ ಮೇಲಕ್ಕೆ ಎಗರ ತೊಡಗಿದವು. ಈ ವೇಳೆ ಕುದುರೆ ಮೇಲೆ ಕುಳಿತಿದ್ದ ಮೌಂಟೆಡ್ ಸಿಬ್ಬಂದಿ ಕುದುರೆ ಕೆಳಗಿಳಿದು ಸಂತೈಸಿದರು.


ಅರಣ್ಯ ಇಲಾಖೆಯ ಮೈಸೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ರವಿಶಂಕರ್, ಡಿಸಿಎಫ್ ಐ.ಬಿ.ಪ್ರಭುಗೌಡ, ಆರ್‍ಎಫ್‍ಒ ನದೀಮ್, ಪಶುವೈದ್ಯ ಆದರ್ಶ್, ಸಹಾಯಕರಾದ ರಂಗರಾಜು, ಅಕ್ರಂ ಪಾಲ್ಗೊಂಡಿದ್ದರು.