
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ವಿದ್ಯಾರ್ಥಿಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯ ಕುರಿತು ಅರಿವು ಮೂಡಿಸುವುದು ಹಾಗು ಈ ಕೋರ್ಸ್ ಗೆ ಸೇರ್ಪಡೆಯಾಗುವಂತೆ
ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ನಗರದ
40ಕ್ಕೂ ಹೆಚ್ಚು ಕಾಲೇಜುಗಳು ಸೇರಿದಂತೆ ಸಿರುಗುಪ್ಪ, ಸಿಂಧನೂರು, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರುಗಳಲ್ಲಿ ಹಮ್ಮಿಕೊಂಡಿತ್ತು.
ಆ. 21ರಂದು ನಡೆದ ಈ ಅಭಿಯಾನದಲ್ಲಿ 60ಕ್ಕೂ ಹೆಚ್ಚು ಸಂಸ್ಥೆಯ ಸದಸ್ಯರು ಭಾಗವಹಿಸಿ
6,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ನ ಅವಕಾಶಗಳು, ವಿದ್ಯಾಭ್ಯಾಸದ ವಿಧಾನ, ವೃತ್ತಿ ಅವಕಾಶಗಳು ಹಾಗೂ ಭವಿಷ್ಯದ ಸಾಧ್ಯತೆಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಶಾಖೆಯ ಅಧ್ಯಕ್ಷ ಪುರುಷೋತ್ತಮರೆಡ್ಡಿ , ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆನ್ಸಿ ಕೋರ್ಸ್ಗೆ ಸೇರ್ಪಡೆಯಾಗಬೇಕು. ಅತ್ಯಂತ ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ವೃತ್ತಿಪರ ಶಿಕ್ಷಣ ಪಡೆಯಲು ಈ ಕೋರ್ಸ್ ಉತ್ತಮ ಅವಕಾಶವಾಗಿದ್ದು, ಕೋರ್ಸ್ ಪೂರ್ಣಗೊಳಿಸಿದ ನಂತರ ಉದ್ಯೋಗದ ಜೊತೆಗೆ ಸ್ವಂತ ಕಚೇರಿ ಆರಂಭಿಸಿ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡುವ ಅವಕಾಶವೂ ಇದೆ.
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಗುರಿಯತ್ತ ಸಾಗುತ್ತಿದ್ದು, ಈ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶದ ಆರ್ಥಿಕ ಬೆಳವಣಿಗೆ, ಉದ್ಯಮಗಳ ಅಭಿವೃದ್ಧಿ ಹಾಗೂ ಉತ್ತಮ ಹಣಕಾಸು ನಿರ್ವಹಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಎ ವೃತ್ತಿಪರರ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.
ಈ ಕೋರ್ಸ್ಗೆ ವಯಸ್ಸಿನ ಮಿತಿ ಅಥವಾ ಮೀಸಲಾತಿಯ ಆಧಾರದ ಮೇಲೆ ನಿರ್ಬಂಧವಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ವೃತ್ತಿಪರವಾಗಿ ಅರ್ಹತೆಪಡೆದ ನಂತರ ಜೀವನಪರ್ಯಂತ ಪ್ರಾಕ್ಟೀಸ್ ಮಾಡುವ ಅವಕಾಶವಿದೆ ಎಂದು ವಿವರಿಸಿದ್ದಾರೆ.
ಈ ಅಭಿಯಾನದಲ್ಲಿ ಬಳ್ಳಾರಿ ಶಾಖೆಯ ಉಪಾಧ್ಯಕ್ಷೆ ಸ್ವಪ್ನ ಪ್ರಿಯ, ಕಾರ್ಯದರ್ಶಿ ಶರಣ್ ಪಾಟೀಲ್, ಖಜಾಂಚಿ ವಿಶ್ವನಾಥ್ ಆಚಾರಿ, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಹನುಮಂತ ರೆಡ್ಡಿ, ಸಹ ಸದಸ್ಯರಾದ ವೆಂಕಟೇಶ್ ಗುಂಡ ಮತ್ತು ಜಿತೇಂದ್ರ ಸುತಾರ್, ಮಾಜಿ ಅಧ್ಯಕ್ಷ ಗಜರಾಜ್ ಸೇರಿದಂತೆ ಶಾಖೆಯ ವಿವಿಧ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕರಾಗಿ ಪಿ.ಎ. ವೆಂಕಟನಾರಾಯಣ ಅವರು ವಿವಿಧ ಕಾಲೇಜುಗಳೊಂದಿಗೆ ಸಮನ್ವಯ ಸಾಧಿಸಿ, ಕಾರ್ಯಕ್ರಮದ ಯೋಜನೆ, ವ್ಯವಸ್ಥೆ ಮಾಡಿದ್ದರು.
ಆ 24ರಂದು ಸಹ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.































