
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ.25 ಈ ಹಿಂದೆ ಹಿಂದುಳಿದ ಸಮುದಾಯಗಳಿಗೆ ದೇವರಾಜ ಅರಸು ಅವರು ದೊಡ್ಡ ಶಕ್ತಿಯಾಗಿದ್ದರೆ, ಪ್ರಸ್ತುತ ದಿನಮಾನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಅವರ ಅವಧಿಯಲ್ಲಿ ಎಲ್ಲಾ ಹಿಂದುಳಿದ ವರ್ಗಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.
ಸ್ಥಳೀಯ ಒಳಾಂಗಣಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಹಾಗು ಜಿಲ್ಲಾ ಕನಕ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗು ನಿವೃತ್ತ ನೌಕರರ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇತರೆ ಸಮುದಾಯಗಳು ಶಿಕ್ಷಣ ಸಂಸ್ಥೆಗಳಿಗೆ ಒತ್ತು ಕೊಟ್ಟಂತೆ, ಕುರುಬ ಸಮಾಜದವರು ಕೂಡ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮುಂದೆ ಬಂದರೆ, ಸರ್ಕಾರದಿಂದ ನೀಡುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳು ಕೇವಲ ಎಂಬಿಬಿಎಸ್, ಇಂಜಿನಿಯರಿಂಗ್ ಕೋರ್ಸ್ಗಳಿಗೆ ಸೀಮಿತವಾಗದೆ, ಹೋಟೆಲ್ ಮ್ಯಾನೇಜ್ಮೆಂಟ್, ಟಿವಿ, ಐಟಿ, ಬಿಟಿ, ಮೊಬೈಲ್ ರಿಪೇರಿ ಯಂತಹ ಕೌಶಲ್ಯಾಭಿವೃದ್ದಿ ತರಬೇತಿ ಪಡೆದು ಉದ್ಯೋಗ ಪಡೆಯಲು ಮುಂದಾಗುವಂತೆ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಆನಂದಸಿಂಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಭೂತಕಾಲ ವೇಸ್ಟ್ ಪೇಪರ್ ಇದ್ದಂತೆ, ವರ್ತಮಾನ ಕಾಲ ನ್ಯೂಸ್ ಪೇಪರ್ ಇದ್ದಂತೆ, ಭವಿಷ್ಯತ್ ಕಾಲ ಪ್ರಶ್ನೆ ಪೇಪರ್ ಇದ್ದಂತೆ, ಅದು ಯಾವುದು ಇಲ್ಲದ್ದು ಟಿಶ್ಯೂ ಪೇಪರ್ ಇದ್ದಂತೆ. ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದೇನೆ, ಫೇಲ್ ಆಗಿದಿನಿ ಅಂತ ಸುಮ್ಮನೇ ಕೂರಬಾರದು. ಯಾವುದೇ ಕಾರಣಕ್ಕೂ ಕುಗ್ಗಬಾರದು. ಆತ್ಮವಿಶ್ವಾಸದಿಂದ ನಿರಂತರ ಅಭ್ಯಾಸ ನಡೆಸಿದರೆ, ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಲಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಕಾಟಾಚಾರಕ್ಕೆ ಓದದೇ, ಗುರಿ ಇಟ್ಟುಕೊಂಡು ಓದಬೇಕು. ಪೋಷಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ಹೇರದೇ, ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನೇ ಓದಲು ಅವಕಾಶ ನೀಡಿದರೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಅನುಕೂಲವಾಗುತ್ತದೆ ಎಂದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ವಹಿಸಿದ್ದರು. ಸಮಾರಂಭದಲ್ಲಿ ಗುಡಾ ಅಧ್ಯಕ್ಷ ಹೆಚ್.ಎನ್.ಮಹಮದ್ ಇಮಾಮ್ ನಿಯಾಜಿ, ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್ ಸೇರಿದಂತೆ ಸಮಾಜದ ಬಂಧುಗಳು ಭಾಗವಹಿಸಿದ್ದರು.






















