ಸಂಜೆವಾಣಿ ನ್ಯೂಸ್
ಮೈಸೂರು: ಅ.27:- ಸಾಹಿತ್ಯ ಜೀವ ಪರ ಹಾಗೂ ಜನ ಪರವಾಗಿದ್ದರೆ ಮೌಲ್ಯ ಹೆಚ್ಚು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ. ಶಿವಸ್ವಾಮಿ ಹೇಳಿದರು.
ಬೋಗಾದಿಯ ಸನ್ವಿತಿ ಪ್ರಕಾಶನವು ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೃತಿ ಲೋಕಾರ್ಪಣೆ, ಕನ್ನಡ ಕಾವ್ಯಸಂಭ್ರಮ ಹಾಗೂ ರಾಜ್ಯ ಮಟ್ಟದ ಸನ್ವಿತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನ ಸಾಹಿತ್ಯದಿಂದ ಮಾನವೀಯ ಮೌಲ್ಯಗಳು ಕೂಡ ಹೆಚ್ಚಾಗುತ್ತವೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ. ಇದರಿಂದಾಗಿ ಭಯದ ವಾತಾವರಣ ಉಂಟಾಗಿದೆ. ಇದು ನಿವಾರಣೆ ಆಗಬೇಕಾದರೆ ಅಕ್ಷರಗಳ ಮೂಲಕ ಅರಿವು ಮೂಡಿಸಬೇಕಾಗಿದೆ, ಸಾಮರಸ್ಯ, ಸಮಾನತೆಯ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಅವರು ಹೇಳಿದರು.
ಬದುಕನ್ನು ಶ್ರೀಮಂತಿಕೆ, ಅಂತಸ್ತಿನಿಂದ ಅಳೆಯುವುದಲ್ಲ. ಮಾನವೀಯ ಮೌಲ್ಯಗಳಿಂದ ಅಳೆಯಬೇಕು.ಆ ರೀತಿಯ ಸಾಹಿತ್ಯ ಕೃಷಿ ಮಾಡಬೇಕು ಎಂದು ಅವರು ಸಲಹೆ ಮಾಡಿದರು. ಸಾಹಿತ್ಯ ಓದುವುದು ಉತ್ತಮ ಕಾರ್ಯ. ಏಕೆಂದರೆ ಅಕ್ಷರ ಜ್ಞಾನದಿಂದ ಅರಿವು ಉಂಟಾಗುತ್ತದೆ. ಶಿಕ್ಷಣದಿಂದಾಗಿ ಪ್ರತಿಯೊಬ್ಬರೂ ಸಾಹಿತ್ಯ ಓದಿ, ಅರಿತು ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಸಾಹಿತ್ಯ ರಚನೆ ಕೂಡ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಯಾರಿಗೆ ಅಧ್ಯಯನ, ಆಸಕ್ತಿ ಇದೆಯೋ ಅವರಿಗೆ ಸಿದ್ದಿಸುತ್ತದೆ ಎಂದ ಅವರು, .ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಶಕ್ತಿ, ತಾಕತ್ತು ಇದೆ. ಆದ್ದರಿಂದಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುಕರ್ ಪ್ರಶಸ್ತಿ ಕೂಡ ದೊರೆತಿದೆ. ಇನ್ನೂ ಹೆಚ್ಚಾಗಿ ಕನ್ನಡ ಸಾಹಿತ್ಯ ಬೆಳೆಯಬೇಕು ಎಂದರು.
ಪ್ರತಿಯೊಂದು ಮನೆಯಲ್ಲಿಯೂ ಗ್ರಂಥ ಭಂಡಾರ ಇರಬೇಕು. ಪೆÇೀಷಕರು ಕೂಡ ಮಕ್ಕಳಿಗೆ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ಇದರಿಂದ ಸಾಧನೆ ಮಾಡಲು ಅನುಕೂಲವಾಗುತ್ತದೆ.
ಬಿಡುವಿನ ವೇಳೆ ಮಕ್ಕಳೊಂದಿಗೆ ಸಂವಹನ ನಡೆಯಬೇಕು. ಆಗ ಮಾತ್ರ ಮಾನವೀಯ ಸಂಬಂಧ, ಜೀವನ ಸಂಬಂಧ, ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ ಎಂದರು.
ಬಸಪ್ಪ ಸಿ. ಸಾಲುಂಡಿ ಅವರ ಹೊನ್ನೇರು- ಪರಿಷ್ಕೃತ ಕವನ ಸಂಕಲನ ಹಾಗೂ ಕರುನಾಡ ಕಾರಂತಜ್ಜ- ಸಂಪಾದಿತ ಕೃತಿಯನ್ನು ಸ್ಸಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಬಿಡುಗಡೆ ಮಾಡಿ ಮಾತನಾಡಿ, ಬೋಧಕವರ್ಗದವರು ಭೋದನೆ, ಸಂಶೋಧನೆ ಹಾಗೂ ಅಧ್ಯಯನಶೀಲತೆಯಿಂದ ದೂರವಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಇದರ ಬದಲು ಶಿಕ್ಷಕರು ತಾವು ಬೋಧನೆ, ಸಂಶೋಧನೆ, ಅಧ್ಯಯನಶೀಲತೆಯಲ್ಲಿ ತೊಡಗಿ ವಿದ್ಯಾರ್ಥಿಗಳಲ್ಲೂ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ಮಾಡಿದರು.
ಕೃತಿ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ, ಬಸಪ್ಪ ಅವರು ಗುಣ ಪಕ್ಷಪಾತಿ, ಜಾತೀಯತೆ ಮಾಡುವುದಿಲ್ಲ. ಬದಲಿಗೆ ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ ಎಂದು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವುದೇ ಸಾಕ್ಷಿ ಎಂದರು.
ಹೊನ್ನೇರು ಕವನ ಸಂಕಲನದಲ್ಲಿ ಮಹನೀಯರ ಆದರ್ಶ ಇದ್ದರೆ, ಕರುನಾಡ ಕಾರಂತಜ್ಜ ಸಂಪಾದಿತ ಕೃತಿಯು ಕಾರಂತರ ಹತ್ತು ಮುಖಗಳನ್ನು ತಿಳಿಯಲು ಸಹಾಯಕವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ವಹಣಾ ಶಾಸ್ತ್ರ ವಿಭಾಗದ ಅಧ್ಯಕ್ಷ ಪೆÇ್ರ.ಸಿ. ಮಹದೇವಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ.ಎನ್. ನಾಗೇಂದ್ರ ಮುಖ್ಯ ಅತಿಥಿಯಾಗಿದ್ದರು. ಮೈಮುಲ್ ಅಧ್ಯಕ್ಷ ಈರೇಗೌಡ ಇದ್ದರು.
ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕಂಚಿನಕೆರೆ ಗೋವಿಂದೇಗೌಡ ಆಶಯ ಭಾಷಣ ಮಾಡಿದರು. ಸನ್ವಿತಿ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಬಸಪ್ಪ ಸಿ. ಸಾಲುಂಡಿ ಸ್ವಾಗತಿಸಿದರು. ಡಾ.ಅಂಬಳೆ ಮಹದೇವಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಮಹಾಲಿಂಗ ಪ್ರಾರ್ಥಿಸಿದರು. ಅಮ್ಮ ರಾಮಚಂದ್ರ ಒಳಿತು ಮಾಡು ಮನಸು..ಗೀತೆ ಹಾಡಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಕಥೆಗಾರ ಡಾ.ಮೊಗಳ್ಳಿ ಗಣೇಶ್ ಅವರಿಗೆ ಆರಂಭದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕವಿಗೋಷ್ಠಿ: ನಂತರ ಸಾಹಿತಿ ಸುಚಿತ್ರಾ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಿ.ಆರ್. ಶ್ರೀಧರ್, ಮುಖ್ಯ ಅತಿಥಿಯಾಗಿದ್ದರು. ಕೆ.ಸಿ. ರತ್ನಶ್ರೀ ಶ್ರೀಧರ್ ಆಶಯ ಭಾಷಣ ಮಾಡಿದರು. ಡಾ.ಎಚ್. ನವೀನ್‍ಕುಮಾರ್ ಇದ್ದರು. ವಿವಿಧೆಡೆಯಿಂದ ಬಂದಿದ್ದ 26 ಕವಿಗಳು ಕವನ ವಾಚಿಸಿದರು.



























