Home ಜಿಲ್ಲೆ ಸಾವು, ನೋವು ಮರೆಸುವ ಶಕ್ತಿ ಸಾಹಿತ್ಯಕ್ಕಿದೆ-ಡಾ.ಟಿ.ಎಸ್. ಗೊರವರ

ಸಾವು, ನೋವು ಮರೆಸುವ ಶಕ್ತಿ ಸಾಹಿತ್ಯಕ್ಕಿದೆ-ಡಾ.ಟಿ.ಎಸ್. ಗೊರವರ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.22 ಸಾವು, ನೋವು, ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಸ್. ಗೊರವರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ಅಲ್ಲಮ ಸಭಾಂಗಣದಲ್ಲಿ ನಮ್ಮ ಮಾತು-39 ಕಾರ್ಯಕ್ರಮದ ಅಂಗವಾಗಿ ಜರುಗಿದ ಕಾಯಗುಡ್ಡ ಕಾದಂಬರಿ ಕುರಿತು ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ್ಲ ಕಾದಂಬರಿ ಕುರಿತು ಮಾತನಾಡಿದ ಅವರು, ಲೇಖಕರು ಶಹಾಪುರ ಭಾಗದ 1980ರ ದಶಕದ ಬದುಕಿನ ಚಿತ್ರಣವನ್ನು ಈ ಕಾದಂಬರಿಯಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಇರುವ ಸಿದ್ಧ ಮಾದರಿಗಳನ್ನು ಮುರಿಯುವ ಪ್ರಯತ್ನ ಕಾದಂಬರಿಯಲ್ಲಿ ಕಾಣುತ್ತದೆ.

ದಿನಚರಿಯಾಗಿ ಮುಗಿದು ಹೋಗಬಹುದಾಗಿದ್ದ ವಸ್ತುವನ್ನು ಕಾದಂಬರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದು ಸೂಕ್ಷ್ಮ ಸಂವೇದನೆಯ ಬರಹಗಾರರಿಗೆ ಮಾತ್ರ ಸಾಧ್ಯ. ಈ ಕಾದಂಬರಿಗೆ ಮುಖ್ಯ ಕಥಾ ಹಂದರವಿಲ್ಲ. ತಾತ ಮತ್ತು ಮೊಮ್ಮಗನ ನೆನಪುಗಳೊಂದಿಗೆ ಕಥೆ ಆರಂಭವಾಗುತ್ತದೆ. ಇಂದಿನ ಎಐ ಯುಗದಲ್ಲಿ ಹಳೆಯ ವಸ್ತುಗಳು ಮತ್ತು ಗ್ರಾಮೀಣ ಬದುಕಿನ ಅನೇಕ ಅಲಕ್ಷಿತ ಸಂಗತಿಗಳು ಮರೆಯಾಗುತ್ತಿವೆ. ಅಂತಹ ಮರೆತು ಹೋಗುತ್ತಿರುವ ವಸ್ತುಗಳು ಮತ್ತು ನೆನಪುಗಳನ್ನು ಕಾದಂಬರಿ ಮತ್ತೆ ನಮ್ಮ ಮುಂದೆ ತರುತ್ತದೆ. ಗ್ರಾಮೀಣ ಬದುಕಿನ ಸಂಘರ್ಷ, ಸಂತೋಷ ಮತ್ತು ಒಬ್ಬ ಮುಗ್ಧ ಹುಡುಗನ ಬದುಕನ್ನು ಕಾದಂಬರಿ ಪರಿಚಯಿಸುತ್ತದೆ. ಓದುಗರು ಕಾದಂಬರಿಯನ್ನು ಓದಿ ಅದರ ಸಾರ್ಥಕತೆಯನ್ನು ಅರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಒಬ್ಬ ಲೇಖಕ ಬರೆದ ನಂತರ ಓದುಗನಾಗುತ್ತಾನೆ, ಓದುಗ ಆನಂತರ ಲೇಖಕನಾಗಬೇಕು. ಈ ಪ್ರಕ್ರಿಯೆಯೇ ವಿಮರ್ಶೆಯ ಮೂಲ ಸ್ವರೂಪವಾಗಿದೆ. ಸಮಕಾಲೀನ ಜಗತ್ತು ನಮಗೆ ನೋವು ಮತ್ತು ಹಿಂಸೆಯನ್ನು ನೀಡಿದಾಗಲೆಲ್ಲ ನಮ್ಮ ಬಾಲ್ಯ ಮತ್ತು ತಂದೆ-ತಾಯಿಯರ ನೆನಪಾಗುತ್ತದೆ. ಈ ಕಾದಂಬರಿ ಮೂರು ತಲೆಮಾರುಗಳ ನಡುವೆ ನಡೆಯುವ ಕಥೆಯಾಗಿದ್ದು, ಕಳೆದು ಹೋದ ನೆನಪುಗಳನ್ನು ಮತ್ತೆ ಮತ್ತೆ ನೆನಪಿಗೆ ತರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಯಗುಡ್ಡ ಕಾದಂಬರಿಯ ಲೇಖಕರು ಹಾಗೂ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ, ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಆಡಳಿತ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಕೆಂಪೇಗೌಡ ಬಿ., ಪ್ರವೀಣ ಕಿತ್ನೂರು, ಪಾಲಯ್ಯ ಹಾಗೂ ಸಂತೋಷ ಕಾರ್ಯಕ್ರಮದಲ್ಲಿ ಕಾದಂಬರಿಯ ಸಂವಾದಕರಾಗಿ ಭಾಗವಹಿಸಿದರು.

ಸಂಶೋಧನಾರ್ಥಿ ನಾಗರಾಜ ಎಚ್.ಅಂತರವಳ್ಳಿ ಸ್ವಾಗತಿಸಿದರು. ಶಬೀನಾಬಾನು ನಿರೂಪಿಸಿ, ವಂದಿಸಿದರು.