
ಸಂಜೆವಾಣಿ ವಾರ್ತೆ
ಹನೂರು, ಮೇ.21- ನಿನ್ನೆ ಲಿಂಗೈಕ್ಯರಾದ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಸಾಲೂರು ಬೃಹನ್ ಮಠದ ಹಿರಿಯ ಶ್ರೀಗಳಾದ ಶ್ರೀಪಟ್ಟದ ಗುರುಸ್ವಾಮೀಜಿ ರವರ ಅಂತ್ಯಕ್ರಿಯೆ ನಿನ್ನೆ ಸಂಜೆ ಸಾಲೂರು ಬೃಹನ್ ಮಠದ ಆವರಣದಲ್ಲಿ ನಡೆಯಿತು.
ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ನಿನ್ನೆ ಮುಂಜಾನೆ ಲಿಂಗೈಕೆರಾಗಿದ್ದರು.
ಶ್ರೀ ಗುರುಸ್ವಾಮೀಜಿ ಅವರು ತಾಲೂಕಿನ ಜಿ.ಕೆ.ಹೊಸೂರು (ಗಂಗಾಧರನಕಟ್ಟೆ) ಗ್ರಾಮದ ರುದ್ರಪ್ಪ ಮತ್ತು ಪುಟ್ಟ ಮಾದಮ್ಮರ ಜೇಷ್ಠ ಪುತ್ರರಾಗಿದ್ದು 1956 ಆಗಸ್ಟ್ 2 ರಂದು ಜನಿಸಿದ್ದರು. ನಂತರ ಸಾಲೂರು ಬೃಹನ್ ಮಠಕ್ಕೆ 17ನೇ ಪೀಠಾಧ್ಯಕ್ಷರಾಗಿ 1995ರ ಜ.29 ರಂದು ಅಧಿಕಾರ ವಹಿಸಿಕೊಂಡಿದ್ದರು.
ಶ್ರೀ ಪಟ್ಟದ ಗುರುಸ್ವಾಮೀಜಿ ಅವರು ತಮ್ಮ 12ನೇ ವಯಸ್ಸಿನಲ್ಲಿ ಶ್ರೀಮಠಕ್ಕೆ ಬಂದು ಕಾಯಾ ವಾಜಾ ಮನಸ ತ್ರಿಕರಣ ಶುದ್ದಿಯಿಂದ ಎಲೆಮರೆಕಾಯಿಯಂತೆ ದುಡಿದರು.
ಶ್ರೀಗಳ ಅಧಿಕಾರ ಅವಧಿಯಲ್ಲಿ ಶ್ರೀಮಠದಲ್ಲಿ ನಿತ್ಯ ದಾಸೋಹ ಸೇವೆ, ಶ್ರೀಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಶ್ರೀಮಠದ ಅಭಿವೃದ್ಧಿ, ಅರ್ಚಕರ ಜೀವನದ ಉದ್ದಾರ ಜೊತೆಗೆ ಶ್ರೀ ಸಾಲೂರುಸ್ವಾಮಿ ಟ್ರಸ್ಟ್ ವತಿಯಿಂದ ಪೆÇನ್ನಾಚಿ ಗ್ರಾಮದಲ್ಲಿ ಗಿರಿಜನ, ದೀನ ದಲಿತರ, ಹಿಂದುಳಿದವರ ಉಳಿವಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆಯಾಯಿತು. 1999ರಲ್ಲಿ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದಲ್ಲಿ ಪ್ರೌಢಶಾಲೆ, ಹನೂರು ಹೊರವಲಯದಲ್ಲಿ ಹುಲುಸು ಗುಡ್ಡೆ ಬಳಿ ವೃದ್ಧರಿಗೆ ಆಶ್ರಯ ನೀಡಲು 10 ಎಕರೆ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ ನೂರಾರು ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಸಂಸ್ಕೃತ ಪಾಠ ಶಾಲೆಗಳನ್ನು ತೆರೆದಿದ್ದಾರೆ. ಹಬ್ಬ, ಜಾತ್ರೆ ಸಂದರ್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಇಲ್ಲಿ ದಾಸೋಹ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀಜಿ ಅವರು ತಮ್ಮ ಶಿಷ್ಯರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಕಿರಿಯ ಶ್ರೀಗಳನ್ನಾಗಿ ಪಟ್ಟಾಭಿಷೇಕ ಮಾಡಿಸಿದ್ದರು.
ಸುತ್ತೂರು ಶ್ರೀ, ತುಮಕೂರು ಸಿದ್ದಗಂಗಾ ಮಠದ ಶ್ರೀಗಳ ಸಮ್ಮುಖದಲ್ಲಿ ಸಾಲೂರು ಬೃಹನ್ ಮಠದ ಆವರಣದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.
ಗಣ್ಯರಿಂದ ಅಂತಿಮ ದರ್ಶನ: ಸಾಲೂರು ಮಠದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ನಿಧನದ ಸುದ್ದಿ ತಿಳಿದು ಹನೂರು ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕರಾದ ಪರಿಮಳಾನಾಗಪ್ಪ, ಆರ್.ನರೇಂದ್ರ, ಎಸ್. ಬಾಲರಾಜು, ವಿವಿಧ ಮಠಾಧೀಶರು, ಹಲವು ಗಣ್ಯರು ಸಾಲೂರು ಮಠಕ್ಕೆ ತೆರಳಿ ಗುರುಸ್ವಾಮೀಜಿ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆದರು.