
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ಗಣಿಗಾರಿಕೆಗೆ ಕರ್ನಾಟಕ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರದ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಾಳೆಹೊನ್ನೂರಿನಲ್ಲಿ ನೀಡಿದ ಹೇಳಿಕೆಯನ್ನು ಗಣಿ ಬಾಧಿತ ಪ್ರದೇಶದ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಆಕ್ಷೇಪಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಮಿತಿಯ ಮುಖಂಡರು. ಸುಪ್ರೀಂ ಕೋರ್ಟ್ ವಾರ್ಷಿಕ 30 ಮಿಲಿಯನ್ ಟನ್ ಅದಿರಿನ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಇದಕ್ಕಿಂತಲೂ ಹೆಚ್ಚಿಗೆ ನಡೆಯುತ್ತಿರುವಾಗಲೂ. ಯಾರದೋ ಕೆಲವರ ಹಿತಾಸಕ್ತಿಗೆ ಕೆಐಓಸಿಎಲ್ ಮತ್ತು ವಿಎಸ್ ಐಎಲ್ ಗೋಸ್ಕರ ಸಂಡೂರು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಕೇಳುವುದು ಸರಿಯಲ್ಲ.
ಅದಿರು ಬೇಕಾದರೆ ಎನ್ ಎಂ ಡಿ ಸಿ ಗಣಿಗಾರಿಕೆ ಪ್ರದೇಶದಿಂದ ಪಡೆಯಲಿ. ಅಭಿವೃದ್ಧಿಗೆ ಪೂರಕವಾಗಿ ಗಣಿಗಾರಿಕೆ ಇರಲಿ. ಆದರೆ ಪ್ರಕೃತಿ ಯನ್ನು ನಾಶ ಮಾಡುವ ಗಣಿಗಾರಿಗೆ ಅಪಾಯಕಾರಿ ಅದಕ್ಕಾಗಿ ನಮ್ಮ ವಿರೋಧ ಎಂದರು.
ಉತ್ತಮ ರಾಜಕಾರಣಿಯಾಗಿರುವ ಕುಮಾರಸ್ವಾಮಿ ಅವರು ಸರಕಾರಿ ಸ್ವಾಮ್ಯದ ಕಂಪನಿಗಳಿಗೆ ಗಣಿಗಾರಿಕೆ ಕೇಳುವುದು ಸರಿ ಆದರೆ, ಅದಿರನ್ನು ಕೇಂದ್ರ ಸ್ವಾಮ್ಯದ ಎನ್.ಎಂ.ಡಿ.ಸಿ. ಯಿಂದ ಪಡೆಯಲಿ ಎಂದು ಶ್ರೀಶೈಲ ಆಲದಹಳ್ಳಿ ಆಗ್ರಹಿಸಿದರು. ಜೊತೆಗೆ ಎನ್.ಎಂ.ಡಿ.ಸಿ ಕುಡುತಿನಿಯಲ್ಲಿ ಕೈಗಾರಿಕೆ ಆರಂಭಿಸಲು ಪಡೆದಿರುವ ಜಮೀನಿನಲ್ಲಿ ಉಕ್ಕು ಕಾರ್ಖಾನೆ ಆರಂಭಿಸಲಿ ಎಂದರು.
ಕುಮಾರಸ್ವಾಮಿ ಅವರು ಕೆಐಓಸಿಎಲ್ ಹೆಸರಲ್ಲಿ ಹೊಸದಾಗಿ ಗಣಿಗಾರಿಕೆ ಪಡೆದು ನಂತರ ಖಾಸಗಿಯವರಿಗೆ ನೀಡುವ ಹುನ್ನಾರ ಇದೆ ಎಂದು ಆರೋಪಿಸಿದರು.
ಸಮಿತಿಯ ಮುಖಂಡರುಗಳಾದ ಉಗ್ರ ನರಂಸಿಂಹೇಗೌಡ, ಶ್ರೀಶೈಲ ಆಲದಹಳ್ಳಿ, ಟಿ.ಎಂ.ಶಿವಕುಮಾರ್, ಕೆ.ಸೋಮಶೇಖರಗೌಡ, ಎಂ.ಎಲ್.ಕೆ.ನಾಯ್ಡು, ನಾಯ್ಡು , ನಾಗರಾಜ್, ಮೂಲಿಮನೆ ಈರಣ್ಣ ಮೊದಲಾದವರು ಇದ್ದರು.



























