ಸಾಯದೆ ವ್ಯಕ್ತಿ,ಹೇಗೆ ಸ್ವರ್ಗಕ್ಕೆ ಹೋದಾನು ? – ಯು.ಶ್ರೀನಿವಾಸ ಮೂರ್ತಿ.


ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.29:
ಸಮಸ್ಯೆಯ ಆಗರವಾಗಿರುವ ಇಂದಿನ ಜೀವನಕ್ಕೆ ಕಾರಣ ಶಿಕ್ಷಣವೇ ಆಗಿದೆ. ಯಾವುದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುವುದೋ ಅದೇ ನಿಜವಾದ ಶಿಕ್ಷಣ. ಸುಖ, ಸಂತೋಷ, ಆಯಸ್ಸು, ಆರೋಗ್ಯಗಳಿಗೆ ಯಾವುದು ಪೂರಕವಾಗುವುದಿಲ್ಲವೋ ಅದನ್ನು ಶಿಕ್ಷಣ ಎನ್ನಲಾಗದು. ಇಂದು ಹೆಚ್ಚು ಶಿಕ್ಷಣ, ಹೆಚ್ಚು ದುಡಿಮೆಯುಳ್ಳವನೇ ಹೆಚ್ಚು ದುಃಖಿಯಾಗಿರುವನು. ಅಕ್ಷರ ಅಥವಾ ವಿಷಯ ಜ್ಞಾನ ಹೆಚ್ಚಿರದ ಅನಕ್ಷರಸ್ಥನೇ ಪರಮಸುಖಿಯಾಗಿರುವನೆಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿ ನುಡಿದರು.
ನಗರದ ಶ್ರೀಗುರು ತಿಪ್ಪೇರುದ್ರ ಪ್ರೌಢ ಶಾಲೆಯಲ್ಲಿ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 316ನೇ ಮಹಾಮನೆ ಲಿಂ.ಕೆ.ಎಂ.ಗವಿಸಿದ್ದಯ್ಯ ಸರೋಜಮ್ಮ ದತ್ತಿ ಕಾರ್ಯಕ್ರಮದಲ್ಲಿ ಶರಣರ ಶಿಕ್ಷಣ ಕ್ರಾಂತಿ ವಿಷಯದ ಬಗ್ಗೆ ಮಾತನಾಡುತ್ತಾ, ಅನುಭವ ಮಂಟಪದಲ್ಲಿ ಬಸವಾದಿ ಶರಣರು ಅಂತರಂಗದ ಅರಿವಿನ ಬೆಳಕಲ್ಲಿ ಅಕ್ಷರಸ್ಥರಾಗಿ ವಚನ ರಚನೆ ಮಾಡುವ ಹಂತಕ್ಕೆ ತಲುಪಿದರು. ಇದು ಶರಣರ ಸಮಗ್ರ ಶಿಕ್ಷಣ ಕ್ರಾಂತಿ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಜಿ.ನಾಗರಾಜರವರು ಮಗುವಿನಲ್ಲಿಯ ಸಕಾರಾತ್ಮಕ ಬೆಳವಣಿಗೆಯೇ ನಿಜವಾದ ಶಿಕ್ಷಣ. ಕೇವಲ ಪದವಿಗಳಿಕೆಯೇ ಶಿಕ್ಷಣ ಆಗಲಾರದೆಂದರು.
ಎಸ್.ಜಿ.ಟಿ.ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಎನ್.ರುದ್ರಪ್ಪನವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಮುಖ್ಯ ಗುರುಗಳಾದ ಜಿ.ಮಂಜುಳ ಮತ್ತು ಇಲಿಯಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯ ಮಾಡಿ ಶರಣು ಸಮರ್ಪಿಸಿದರು.
ಶಿಕ್ಷಕಿ ಸೌಮ್ಯ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶ್ರೀನಿಧಿ, ಲಾವಣ್ಯ, ಶಾರದಾ ವಚನ ಪ್ರಾರ್ಥನೆ ಮಾಡಿದರು. ಸಭೆಯಲ್ಲಿ ನಿವೃತ್ತ ಶಿಕ್ಷಕ ಚಂದ್ರಯ್ಯ ಮಠದ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.