
ಸಂಜೆವಾಣಿ ನ್ಯೂಸ್
ಮೈಸೂರು: ನ.15:- ಸದಾ ದೇಶ ವಿದೇಶದ ಸಾವಿರಾರು ಪ್ರವಾಸಿಗರಿಂದ ತುಂಬಿರುತ್ತಿದ್ದ ಅರಮನೆ, ಮೃಗಾಲಯ, ವಸ್ತುಪ್ರದರ್ಶನ ಶುಕ್ರವಾರ ಚಿಣ್ಣರಿಂದ ತುಂಬಿದ್ದವು. ಐತಿಹಾಸಿಕ ಅರಮನೆಯ ಅಂದ, ಮೃಗಾಲಯದಲ್ಲಿನ ವಿವಿಧ ಪ್ರಾಣಿ, ಪಕ್ಷಿಗಳನ್ನು ಕಂಡು, ವಸ್ತುಪ್ರದರ್ಶನದಲ್ಲಿ ಆಡಿ ನಲಿದ ಸಾವಿರಾರು ಚಿಣ್ಣರು ಸಂತಸಪಟ್ಟರು.
ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಶುಕ್ರವಾರ ಮಕ್ಕಳದೇ ಕಾರುಬಾರು. ನಗರದ ಎಲ್ಲಾ ಶಾಲೆಗಳಲ್ಲೂ ಮಕ್ಕಳ ದಿನಾಚರಣೆಯ ಸಂಭ್ರಮ ಕಳೆಗಟ್ಟಿತ್ತು. ಮಕ್ಕಳು ತಮ್ಮ ಪ್ರೀತಿಯ ಚಾಚಾ, ಭಾರತದ ಮೊದಲ ಪ್ರಧಾನಿ ಜವಹರ್‍ಲಾಲ್ ನೆಹರೂ ಅವರನ್ನು ಸ್ಮರಿಸಿದರು. ಶಿಕ್ಷಕರು ಅರಮನೆ, ಮೃಗಾಲಯ, ವಸ್ತುಪ್ರದರ್ಶನ ಮೊದಲಾದ ಸ್ಥಳಗಳಿಗೆ ಕರೆದೊಯ್ದು ಮಕ್ಕಳು ಸಂಭ್ರಮಿಸುವಂತೆ ಮಾಡಿದರು. ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿ ರೋಮಾಂಚಿತರಾದ ಚಿಣ್ಣರು, ಅರಮನೆಯ ಐತಿಹಾಸಿಕ ಹಿನ್ನೆಲೆ, ಅಲ್ಲಿನ ವಸ್ತುಗಳು, ಮೈಸೂರು ಒಡೆಯರ ಇತಿಹಾಸ, ಸಂಸ್ಕೃತಿ ಕುರಿತು ಮಾಹಿತಿ ಪಡೆದರು.
ಮಕ್ಕಳ ದಿನಾಚರಣೆ ಅಂಗವಾಗಿ ವಸ್ತುಪ್ರದರ್ಶನದಲ್ಲಿ ಮಕ್ಕಳಿಗಾಗಿ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ವಸ್ತುಪ್ರದರ್ಶನಕ್ಕೆ ಆಗಮಿಸಿದ ಚಿಣ್ಣರಿಗೆ ಅಕ್ಕರೆಯ ಸ್ವಾಗತ ಕೋರಲಾಯಿತು. ಬೆಳಗ್ಗೆಯಿಂದಲೇ ವಸ್ತುಪ್ರದರ್ಶನದಲ್ಲಿ ಮಕ್ಕಳ ಜಾತ್ರೆಯೇ ನೆರೆದಿತ್ತು. ವಸ್ತುಪ್ರದರ್ಶನದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡರು. ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು.
ಮೃಗಾಲಯದಲ್ಲಿ ಚಿಣ್ಣರ ಕಲರವ: ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಲು ಮುಗಿ ಬಿದ್ದರು. ಬೆಳಗ್ಗೆ 8.30ರಿಂದ ಮಧ್ಯಾಹ್ನ 12 ಗಂಟೆವರೆಗೆ 12 ವರ್ಷದೊಳಗಿನ ಮಕ್ಕಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶಾವಕಾಶ ನೀಡಲಾಗಿತ್ತು. ಗ್ರಾಮೀಣ ಪ್ರದೇಶದಿಂದ ತಂಡೋಪ ತಂಡವಾಗಿ ಆಗಮಿಸಿದ್ದ ಮಕ್ಕಳು ಮೃಗಾಲಯ ವೀಕ್ಷಿಸಿ ಸಂಭ್ರಮಿಸಿದರು. ಸಮವಸ್ತ್ರ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಮೃಗಾಲಯ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿದ್ದರಿಂದ ಮೃಗಾಲಯದ ಒಳಗೆ ಪ್ರಾಣಿಗಳ ಬೋನ್ ಬಳಿ ನುಸುಳದಂತೆ ಕಟ್ಟೆಚ್ಚರ ವಹಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ಕುಣಿದು ಕುಪ್ಪಳಿಸಿದರು: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ದಸರಾ ವಸ್ತು ಪ್ರದರ್ಶನಕ್ಕೆ ಬೆಳಗ್ಗೆಯಿಂದ 11 ಮಧ್ಯಾಹ್ನ 4 ಗಂಟೆವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಬಂದ ಹಿನ್ನೆಲೆಯಲ್ಲಿ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಮಕ್ಕಳ ಜಾತ್ರೆ ನಡೆದಂತೆ ಕಂಡು ಬಂತು. ಎಲ್ಲಿ ನೋಡಿದರೂ ಮಕ್ಕಳ ದಂಡೇ ಕಾಣುತ್ತಿತ್ತು. ವಿವಿಧ ಆಟೋಟ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸಂಗೀತಕ್ಕೆ ಕುಣಿತು ಕುಪ್ಪಳಿಸಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮಕ್ಕಳಿಗೆ ಸಿಹಿ, ಗುಲಾಬಿ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಮಕ್ಕಳಿಗೆ ಉಚಿತವಾಗಿ ಬಾಳೆಹಣ್ಣು, ಕಿತ್ತಲೆಹಣ್ಣು, ಕಡಲೇಕಾಯಿ, ಐಸಿಕ್ರೀಮ್ ವಿತರಿಸಲಾಯಿತು. ಮಧ್ಯಾಹ್ನದ ನಂತರ ಮಕ್ಕಳಿಗೆ ರೈತ್ ಬಾತ್, ಮೊಸರನ್ನು ನೀಡಿ ಹಸಿವು ತಣಿಸಲಾಯಿತು.
ವಸ್ತು ಪ್ರದರ್ಶನ ಆವರಣದಲ್ಲಿನ ಕಾಳಿಂಗರಾವ್ ರಂಗ ಮಂಟಪದಲ್ಲಿ ಪ್ರಾಧಿಕಾರದ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡ ಕೊಡವ ವಾಲಗ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರದರ್ಶಿಸಿ ಮಕ್ಕಳಿಗೆ ಮುದ ನೀಡಿದರು. ಅಲ್ಲದೆ, ಗಾಯನ ಕಾರ್ಯಕ್ರಮವೂ ನೆರೆದಿದ್ದ ಅಪಾರ ಸಂಖ್ಯೆ ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸಿತು. ಇದೇ ವೇಳೆ ಮಕ್ಕಳು ಸಂಗೀತಕ್ಕೆ ಸಾಮೂಹಿಕವಾಗಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಂಗಕರ್ಮಿ ಪ್ರಸನ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರಂಗಕರ್ಮಿ ಮೈಮ್ ರಮೇಶ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‍ಖಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


























