ಸಹಕಾರಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು: ನಂಜುಂಡಪ್ರಸಾದ್ ಆಶಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.17-
ಉತ್ತರ ಕರ್ನಾಟಕ ಭಾಗದ ಮಾದರಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡಿ, ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸದಸ್ಯರಿಗೆ ಸಹಕಾರಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಹಕಾರಿ ಭವನ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.


ನಗರದ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಎಂದರೆ ಪರಸ್ಪರ ಒಬ್ಬರಿಗೊಬ್ಬರು ಒಮ್ಮತದಿಂದ ಮುನ್ನಡೆಯುವುದು ಎಂದರ್ಥ, ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಸಹಕಾರಿ ಸಂಘಗಳು ರಚನೆ ಮಾಡಿ ರೈತಾಪಿ ವರ್ಗಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಜಿಲ್ಲಾ ಸಹಕಾರ ಒಕ್ಕೂಟದಿಂದ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜೊತೆಗೆ ಸಹಕಾರಿಗಳಿಗೆ ಶಿಕ್ಷಣ, ಮತ್ತು ಸಹಕಾರ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಿ, ಇದರಿಂದಾಗುವ ಅನುಕೂಲಗಳ ಬಗ್ಗೆ ಜಾಗೃತಿ ಮುಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹಾಕಿಕೊಳ್ಳಲಾಗುತ್ತದೆ ಎಂದರು.


ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಸಹಕಾರ ಭವನ ನಿರ್ಮಾಣವಾಗಬೇಕೆಂಬ ಕನಸು ಹೊಂದಿದ್ದರು. ಇದಕ್ಕಾಗಿ ಸಂಪಿಗೆ ರಸ್ತೆಯಲ್ಲಿರುವ ಸಹಕಾರ ಸಂಘಕ್ಕೆ ಸೇರಿದ ಜಾಗವನ್ನು ಗುರುತು ಮಾಡಿದ್ದರು. ಇದು ನ್ಯಾಯಾಲಯದಲ್ಲಿದ್ದ ಪ್ರಕರಣ ಇದ್ದ ಕಾರಣದಿಂದ ಹಿನ್ನಡೆಯಾಗಿತ್ತು. ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಸಹಕಾರ ಮಹಾಮಂಡಲಿ ಹಾಗೂ ಸ್ಥಳೀಯ ಸಚಿವರು, ಶಾಸಕರು, ಸಂಸದರ ಸಹಕಾರದಲ್ಲಿ ಒಂದು ಭವನ ನಿರ್ಮಾಣ ಮಾಡುವ ಗುರಿ ನಮ್ಮದಾಗಿದೆ. ಈ ಕಾರ್ಯವನ್ನು ಎಲ್ಲಾ ನಿರ್ದೇಶಕರ ಸಲಹೆ ಸಹಕಾರೊಂದಿಗೆ ರೂಪಿಸುವುದಾಗಿ ತಿಳಿಸಿದರು.


ರಾಜ್ಯ ಸಹಕಾರ ಮಹಾಮಂಡಲದ ಅಧೀನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗು ಇತರೇ ಸಹಕಾರ ಸಂಘಗಳು ಸೇರಿ ಅನೇಕ ಸಹಕಾರ ಸಂಘಗಳು ಸದಸ್ಯತ್ವವನ್ನು ಪಡೆದುಕೊಂಡಿದೆ. ಇನ್ನುಳಿದ ಸಂಘಗಳು ಸಹ ಷೇರು ಪಡೆದು ಸದಸ್ಯರಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ಸಹಕಾರ ಒಕ್ಕೂಟವನ್ನು ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಬೇಕು ಎಂದರು.


ಜಿಲ್ಲಾ ಸಹಕಾರ ಒಕ್ಕೂಟದಿಂದ ಪ್ರತಿ ವರ್ಷ ಸಹಕಾರ ಶಿಕ್ಷಣ ನಿಧಿಯನ್ನು ಪಡೆದುಕೊಳ್ಲುವ ಜೊತೆಗೆ ಮಹಾ ಮಂಡಲಿಗೆ ಪಾವತಿಸಲಾಗುತ್ತಿದೆ. ಮಹಾಮಂಡಲಿ ನೀಡುವ ಅನುದಾನದಲ್ಲಿ ಜಿಲ್ಲೆಯ ಸಹಕಾರಿಗಳಿಗೆ ಶಿಕ್ಷಣ ಕಾರ್ಯಾಗಾರ, ಸಪ್ತಾಹ ಹಾಗೂ ಸಹಕಾರಿ ಕಾಯ್ದೆಗಳ ತಿದ್ದುಪಡಿ ಸೇರಿದಂತೆ ಲೆಕ್ಕ ಪತ್ರ ನಿರ್ವಹಣೆ ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಆಡಳಿತ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಧ್ಯಕ್ಷರು ಹಾಗೂ ಸಿಇಓಗಳಿಗೆ ಕಾರ್ಯಾಗಾರ ನಿಯೋಜನೆ ಜೊತೆಯಲ್ಲಿ ಹಿರಿಯ ನಿರ್ದೇಶಕರನ್ನು ಆಹ್ವಾನಿಸಿ, ಅವರಿಗು ಸಹ ಸಹಕಾರಿ ಶಿಕ್ಷಣವನ್ನು ನೀಡುವ ಚಿಂತನೆ ನಮ್ಮದಾಗಿದೆ ಎಂದರು.


ಹಿರಿಯ ಸಹಕಾರಿ ನಿರ್ದೇಶಕ ಹೊಸೂರು ಸುಂದ್ರಪ್ಪ ಮಾತನಾಡಿ, ಸಹಕಾರ ಕ್ಷೇತ್ರದ ಬೆಳೆದದ್ದು ಗ್ರಾಮ ಅಭಿವೃದ್ದಿ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಪ್ರತ್ಯೇಕ ಸಚಿವಾಲಯವÀನ್ನಾಗಿಸಿದೆ. ಹೀಗಾಗಿ ಸಹಕಾರಿ ಕ್ಷೇತ್ರದ ಪ್ರಗತಿಯಿಂದ ರೈತಾಪಿ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದರು. ಸಭೆಯಲ್ಲಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನುಜ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.


ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪ, ನಿರ್ದೇಶಕರಾದ ಎಚ್.ಎಂ. ಬಸವಣ್ಣ, ನಾಗರಾಜು, ರವಿ, ಪಿ. ಮಹದೇವಸ್ವಾಮಿ, ನಾಗಸುಂದರ್, ಮಹದೇವಪ್ರಭು, ಮಡಿವಾಳಪ್ಪ, ಎಂ. ಪ್ರಭುಸ್ವಾಮಿ, ದಾಕ್ಷಾಯಿಣಿ, ಜಯಶೀಲಾ, ಮಾನೇಜರ್ ಮಲ್ಲಿಕಾರ್ಜುನ್, ಕೆಂಡಗಣ್ಣ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.