
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.14: ಸಂವಿದಾನ ದತ್ತವಾದ ಹಕ್ಕು ಸವಲತ್ತುಗಳಿಗಾಗಿ ಒಕ್ಕಲಿಗ ಸಮುದಾಯ ಸಂಘಟಿತ ಹೋರಾಟದ ಶಕ್ತಿಯಾಗಿ ರೂಪುಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ತಾಲೂಕು ಒಕ್ಕಲಿಗರ ವೇದಿಕೆಯ ಅಧ್ಯಕ್ಷ ವಳಗೆರೆ ಮೆಣಸ ವಿ.ಎಂ.ಕುಮಾರಗೌಡ ಕರೆ ನೀಡಿದರು.
ಅವರು ತಾಲೂಕಿನ ಕಿಕ್ಕೇರಿ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘದ ಭವನದಲ್ಲಿ ಒಕ್ಕಲಿಗರ ವೇದಿಕೆಯ ವತಿಯಿಂದ ಆಯೋಜಿಸಿದ್ದ ಕಿಕ್ಕೇರಿ ಹೋಬಳಿ ಒಕ್ಕಲಿಗ ಸಮುದಾಯ ಮುಖಂಡರ ಸಮುದಾಯ ಜಾಗೃತಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಾದ್ಯಂತ ಒಕ್ಕಲಿಗ ಸಮುದಾಯವನ್ನು ಪ್ರಭಲ ಜಾತಿ ಎಂದು ಹೇಳಲಾಗುತ್ತಿದೆ. ಜನಸಂಖ್ಯೆ ಲೆಕ್ಕಾಚಾರದಲ್ಲಿ ಒಕ್ಕಲಿಗರು ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆರ್ಥಿಕವಾಗಿ ದುರ್ಭಲರಾಗಿದ್ದಾರೆ. ಶೇ.90 ರಷ್ಟು ಒಕ್ಕಲಿಗರು ಅತೀಸಣ್ಣ ಭೂ ಹಿಡುವಳಿದಾರರಾಗಿದ್ದು ಕೃಷಿಯನ್ನು ನಂಬಿ ಬದುಕು ಕಟ್ಟಿಕೊಳ್ಳಲೂ ಅಸಮರ್ಥರಾಗಿದ್ದಾರೆ. ನಾಡಿನ ಜನರಿಗೆ ಅನ್ನ ಬೆಳೆದುಕೊಡುತ್ತಿದ್ದ ಒಕ್ಕಲಿಗ ಅನ್ಯ ವೃತ್ತಿಗಳ ಕೌಶಲ್ಯವಿಲ್ಲದೆ ಕೃಷಿ ಕೂಲಿ ಕಾರ್ಮಿಕನಾಗಿ ಬದಲಾಗುತ್ತಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ಸ್ವಾಭಿಮಾನದಿಂದ ಬದುಕುತ್ತಿರುವ ಒಕ್ಕಲಿಗರ ಮೇಲೆ ಕೆಲವು ಸಮುದಾಯಗಳು ಶೋಷಿತರ ಹೆಸರಿನಲ್ಲಿ ದಬ್ಬಾಳಿಕೆ ಮಾಡುತ್ತಿದ್ದು ತನ್ನ ಮೇಲೆ ನಡೆಯುತ್ತಿರುವ ಸಂಘಟಿತ ದಬ್ಬಾಳಿಕೆಗಳ ವಿರುದ್ದ ಧ್ವನಿಯೆತ್ತಿ ಹೋರಾಟ ಮಾಡಲಾಗದ ಸ್ಥಿತಿಯಲ್ಲಿ ಒಕ್ಕಲಿಗ ಸಮುದಾಯ ಇದೆ.
ಸಮಾಜದ ಎಲ್ಲಾ ಜಾತಿಗಳೂ ತಮ್ಮ ತಮ್ಮ ಹಿತರಕ್ಷಣೆಗಾಗಿ ತಮ್ಮದೇ ಭಾವುಟ ಮತ್ತು ಬ್ಯಾನರ್ ಅಡಿಯಲ್ಲಿ ಸಂಘಟಿತ ಹೋರಾಟ ನಡೆಸುತ್ತಿವೆ. ಇತರ ಸಮುದಾಯದ ರಾಜಕಾರಣಿಗಳು ತಮ್ಮ ತಮ್ಮ ಸಮುದಾಯದ ಜನರಿಗೆ ಅನ್ಯಾಯವಾದಾಗ ಪಕ್ಷಭೇದ ಮರೆತು ಹೋರಾಟ ಮಾಡುತ್ತಿದ್ದರೆ ಒಕ್ಕಲಿಗ ರಾಜಕಾರಣಿಗಳು ಮಾತ್ರ ಸಮುದಾಯದ ಹಿತ ರಕ್ಷಣೆ ಮಾಡುವಲ್ಲಿ ಮುಂದೆ ಬರುತ್ತಿಲ್ಲ ಎಂದರು.
ನ.29 ರಂದು ಕನ್ನಡ ರಾಜ್ಯೋತ್ಸವ: ಒಕ್ಕಲಿಗ ಸಮುದಾಯದ ಸಂಘಟನೆಗಾಗಿ ವೇದಿಕೆಯ ಕಾರ್ಯಕರ್ತರು ಈಗಾಗಲೇ ತಾಲೂಕಿನಾದ್ಯಂತ ಸಮುದಾಯ ಸಂಘಟನೆಗೆ ಹೋಬಳಿ ಮಟ್ಟದಲ್ಲಿ ಸಮುದಾಯ ಮುಖಂಡರ ಸಭೆ ನಡೆಸಲಾಗುತ್ತಿದೆ. ಎಲ್ಲಾ ಹೋಬಳಿಗಳಲ್ಲೂ ಸಭೆ ನಡೆಸಿದ ಅನಂತರ ಇದೇ ನವಂಬರ್ 29 ರಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ವೇದಿಕೆಯ ವತಿಯಿಂದ ಬೃಹತ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಒಕ್ಕಲಿಗರ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುವಂತೆ ಕುಮಾರಗೌಡ ಮನವಿ ಮಾಡಿದರು.
ಒಕ್ಕಲಿಗರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗೌರೀಶ್, ಟಿ.ವೈ.ಆನಂದ, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಹಿರಿಯ ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ಎಂ.ಕೆ.ಹರಿಚರಣತಿಲಕ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ದೇವರಾಜು, ಬೊಪ್ಪನಹಳ್ಳಿ ಸೋಮೇಗೌಡ, ಸಮುದಾಯ ಮುಖಂಡರಾದ ಕಾಯಿ ಮಂಜೇಗೌಡ, ಪರ್ವತರಾಜು, ಆನೆಗೊಳ ಬಾಲಚಂದ್ರ, ಐಕನಹಳ್ಳಿ ಉದಯಕುಮಾರ್, ಐನೋರಹಳ್ಳಿ ಮಲ್ಲೇಶ್, ಕಿಕ್ಕೇರಿ ಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕೆ.ಬಿ.ಮಧು, ವಡಕಹಳ್ಳಿ ಮಂಜೇಗೌಡ, ಪ್ರಸನ್ನ, ಕಾಂತರಾಜು, ಸತ್ಯ, ಶಂಭು ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.


























