ಸರ್ಕಾರ ಗ್ರಾ.ಪಂ ಗಳಿಗೆ ಆಡಳಿತಾಧಿಕಾರಿ ನೇಮಕ ಹಿಂಪಡೆದು, ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲಿ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಜ.21
– ರಾಜ್ಯ ಸರ್ಕಾರ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದನ್ನು ಬಿಟ್ಟು ಆಡಳಿತಾಧಿಕಾರಿಗಳನ್ನು ನಿಯೋಜಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ಖಂಡಿಸಿದ್ದು, ಪಂಚಾಯಿತಿಗೆ ಜನಪ್ರತಿನಿಧಿಗಳು ಆಯ್ಕೆಗೊಳ್ಳಲು ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆಗ್ರಹಿಸಿದೆ.


ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆಯನ್ನು ನೀಡಿರುವ ಮೈಸೂರು ಜಿಲ್ಲಾಧ್ಯಕ್ಷ ಯದುನಾಡು ನಾಗರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್ ಅವರು ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಐದು ವರ್ಷದ ಅವಧಿ ಮುಗಿಯುತಿದ್ದಂತೆ ಚುನಾವಣೆಗಳ ನಡೆಸಿ ನೂತನ ಸದಸ್ಯರ ಆಡಳಿತ ಮಂಡಳಿಯನ್ನು ಆಯ್ಕೆಮಾಡುವ ಪ್ರಕ್ರಿಯೆ ನಡೆಸಲು ಚುನಾವಣೆಗೆ ತಯಾರಾಗದೆ ಸರ್ಕಾರ ಆಡಳಿತಾಧಿಕಾರಿಗಳ ನೇಮಕ ಮಾಡುವ ನಿರ್ಣಯವನ್ನು ಮಾಡಿರುವುದು ಪಂಚಾಯಿತಿ ಸದಸ್ಯರ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.


ಈಗಾಗಲೇ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸದೆ ಐದು ವರ್ಷಗಳ ಕಾಲ ಆಡಳಿತವನ್ನು ಅಧಿಕಾರ ಶಾಹಿಗಳಿಗೆ ವಹಿಸಿದೆ. ಇನ್ಮುಂದೆ ಗ್ರಾಮ ಪಂಚಾಯಿತಿಗಳೂ ಇದೇ ಸ್ಥಿತಿ ತಲುಪಬಹುದೆಂಬ ಆತಂಕದಲ್ಲಿ ಎಲ್ಲರಲ್ಲಿದೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಮಿತಿ ಮತ್ತು ಅಬ್ದುಲ್ ನಜೀರ್ ಸಾಬ್ ಫೌಂಡೇಶನ್ ವತಿಯಿಂದ ಶಾಸಕರು ಹಾಗೂ ವಿಧಾನಸಭಾ ಸದಸ್ಯರುಗಳಿಗೆ ಆಡಳಿತಧಿಕಾರಿಗಳ ನೇಮಕದ ಬದಲು ಹಾಲಿ ಇರುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನೇ ಮುಂದುವರೆಸಲು ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993 ರ ಪ್ರಕರಣ 8 ನ್ನು ತಿದ್ದುಪಡಿ ತರಲು ಶಾಸನಸಭೆಯಲ್ಲಿ ಚರ್ಚಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.


ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳ ನೇಮಕ ಆದೇಶವನ್ನು ಪಡೆದು, ಚುನಾವಣೆ ನಡೆಸುವಂತೆ ಬೇಡಿಕೆಯನ್ನು ಇಟ್ಟುಕೊಂಡು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕವೂ ಮುಖ್ಯ ಮಂತ್ರಿ ಗಳಿಗೆ ಮನವಿ ಸಲ್ಲಿಸಲು ಜ. 23ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ನಾಗರಾಜು ಹಾಗೂ ಮಹೇಶ್ ಮನವಿ ಮಾಡಿದ್ದಾರೆ.