(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.04: ದೇಶ ಅಭಿವೃದ್ಧಿಯಾಗಬೇಕಾದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಆ ಕೆಲಸವನ್ನು ಎಲ್ಲಾ ಜನಪ್ರತಿನಿಧಿಗಳು ಶ್ರದ್ದೆಯಿಂದ ಮಾಡಬೇಕಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿದೆ ಅದನ್ನು ಕಾಳಜಿಯಿಂದ ಮಾಡಬೇಕು ಎಂದು ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷ ಟಿ.ಹೆಚ್. ಎಂ. ಬಸವರಾಜ್ ಹೇಳಿದ್ದಾರೆ.
ಅವರು ತಾಲೂಕಿನ ಹಂದಿಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಟೈ ಬೆಲ್ಟ್ ವಿತರಣೆ ಮಾಡಿ ಮಾತನಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಒಳ್ಳೆಯ ಸಂಬಳ ಮತ್ತು ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಗ್ರಾಮೀಣ ಭಾಗದ ಶಾಲೆಗಳಿಂದ ದೊಡ್ಡಮಟ್ಟದ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊರಲಗುಂದಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಬಿ.ಪಿ ರವಿಚಂದ್ರ, ಟಿ.ಎಚ್.ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಕೆಲಸವನ್ನು ಶ್ಲಾಘಿಸಿದರು. ಮತ್ತೊಬ್ಬ ಅತಿಥಿ ಹಂದಿಹಾಳ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ವೈ.ಕವಿತ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳು ಅಭಿವೃದ್ಧಿ ಕಾಣಲು ಸರ್ಕಾರದ ಯೋಜನೆಗಳ ಜೊತೆಗೆ ಇಂಥ ದಾನಿಗಳ ಸಹಕಾರವು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ವೆಂಕಟೇಶ್ ಮಾತನಾಡಿ ಟಿ.ಹೆಚ್. ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಮಕ್ಕಳಿಗೆ ಮಹತ್ತರವಾದ ಕೆಲಸ ಮಾಡುತ್ತಿದೆ ಎಂದರು.
ಅತಿಥಿಗಳಾಗಿ ಸದಸ್ಯರಾದ ಲಿಂಗಪ್ಪ, ಸುಭಾನ್ ಸಾಬ್ ಹಾಜರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿ ಮಹಿಮಾ ಎಂ ಸಿ ನಿರ್ವಹಿಸಿದರು. ಶಿಕ್ಷಕಿ ನಾಹಿದಾ ಅಂಜುಮ್ ಸ್ವಾಗತಿಸಿ, ಗೀತಮ್ಮ ವಂದಿಸಿದರು.
ಈ ವೇಳೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಇವರಿಗೆ ಟಿ. ಎಚ್. ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ನಿಂದ ಸನ್ಮಾನಿಸಲಾಯಿತು.





















