
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.24: ತಾಲೂಕಿನ ಕಮ್ಮರಚೇಡು ಪಕ್ಕದ ಮಾಳಗಡ್ಡೆ ಕ್ಯಾಂಪ್ ಸರ್ಕಾರಿ ಶಾಲೆ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸಲು ಒಪ್ಪಿಗೆ ಇರುವುದಿಲ್ಲ ಎಂದು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಶಾಲೆ ಮುಂದೆ “ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲಿ ಉಳಿಯಲಿ” ಬ್ಯಾನರ್ ಕಟ್ಟಿ ನಮ್ಮೂರ ಶಾಲೆ ನಮ್ಮೂರಲ್ಲಿ ಉಳಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದರು.
ಹೋರಾಟವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ ಈರಣ್ಣ ಅವರು ಮಾತನಾಡಿ… ಮಾಳಗಡ್ಡೆ ಕ್ಯಾಂಪ್ ಅನ್ನೋ ಊರಿನ ಜನರೆಲ್ಲಾ ಬಹುತೇಕ ರೈತರು. ಬೆಳಿಗ್ಗೆ ಆರು ಗಂಟೆಗೆ ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿರುವ ಸಾಮಾನ್ಯ ಜನರು. ಇಲ್ಲಿನ ಬಹಳಷ್ಟು ಜನರು ತಮ್ಮ ಹೆಸರನ್ನು ಬರೆಯಲು ಬಾರದ ಅವಿದ್ಯಾವಂತ ರೈತರು.. ಈಗಲೂ ಕೂಡ ಎಷ್ಟೋ ಜನ ಹೆಬ್ಬೆಟ್ಟು. ಇಂತಹ ಊರಿನಲ್ಲಿ ಬೆರಳೆಣಿಕೆಯಷ್ಟು ಜನ ವಿದ್ಯಾವಂತರು. ಇಲ್ಲಿ ಅಲ್ಪ ಸ್ವಲ್ಪ ಶಿಕ್ಷಣ ಸಿಗುತ್ತದೆ ಎಂದರೆ ಅದು ಸರ್ಕಾರಿ ಶಾಲೆಗಳಿಂದ ಮಾತ್ರ. ಆದರೆ ರಾಜ್ಯ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತಂದು, ಸರ್ಕಾರಿ ಶಾಲೆ ಮುಚ್ಚಿ ಶಿಕ್ಷಣ ಬೆಕಾದರೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಬನ್ನಿ ಅಂತ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುಲು ಮುಂದಾಗಿದೆ. ಈ ಊರಿನ ಶಾಲೆ ಮುಚ್ಚಿದರೆ 3-4ಕಿ.ಮೀ ದೂರ ವಿಘ್ನೇಶ್ವರ ಕ್ಯಾಂಪ್ ನಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ, ಸಣ್ಣ ಸಣ್ಣ ಮಕ್ಕಳು ಹೇಗೆ ಹೋಗಲು ಸಾಧ್ಯ? . ಎಲ್ಲಾ ರೈತರ ಮಕ್ಕಳು ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ.
ನಮ್ಮೂರ ಶಾಲೆ ನಮ್ಮೂರಲ್ಲಿ ಉಳಿಸಬೇಕೆಂದು ಊರಿನ ಗ್ರಾಮಸ್ಥರು, ಪೋಷಕರು ಅಂತರಾಳದ ಮಾತು ಆಗಿದೆ. ಆದ್ದರಿಂದ ತನ್ನ ಹಟಮಾರಿ ಧೋರಣೆ ಬಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಊರಿನ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಬಸವರಾಜ, ಓಬಣ್ಣ, ದೊಡ್ಡ ಬಸಪ್ಪ, ಶಂಕರ್ ಮತ್ತು ವಿದ್ಯಾರ್ಥಿಗಳು ಗ್ರಾಮಸ್ಥರು, ಪೋಷಕರು ಭಾಗವಹಿಸಿದ್ದರು.





























