ಸರ್ಕಾರಿ ಜಾಗದ ಅಕ್ರಮಕ್ಕೆ ಕಂದಾಯ ಇಲಾಖೆ ಬೇಲಿ..

ಪುತ್ತೂರು; ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಜಾಗವನ್ನು ಮಾರಾಟ ಮಾಡಲು ಪ್ರಯತ್ನಿಸಿದ ವ್ಯಕ್ತಿಗಳಿಬ್ಬರ ವ್ಯವಹಾರಕ್ಕೆ ಕಂದಾಯ ಇಲಾಖೆ ತಾತ್ಕಾಲಿಕ ಶೆಡ್ ತೆರವು ಮಾಡುವ ಮೂಲಕ ಅಕ್ರಮ ವ್ಯವಹಾರಕ್ಕೆ ಬೇಲಿ ಹಾಕಿದ ಘಟನೆ ನಡೆದಿದೆ.
ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮ ವ್ಯಾಪ್ತಿಯ ನೆಕ್ಕರೆ ಎಂಬಲ್ಲಿ ಸರ್ವೆ ನಂ.೧೦೧ರಲ್ಲಿ ಒಂದು ಎಕರೆ ಸ್ಥಳವನ್ನು ರವೂಫ್ ಹಾಗೂ ರಶೀದ್ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಈ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ನಕಲಿ ದಾಖಲೆ ಸೃಷ್ಟಿಸಿ ಸ್ಥಳವನ್ನು ಮಾರಾಟ ನಡೆಸಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರ ದೂರಿನಂತೆ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಲು ನೋಟೀಸು ನೀಡಲಾಗಿತ್ತು. ಆದರೆ ಸ್ಥಳ ತನಿಖೆಗೆ ಅಧಿಕಾರಿಗಳು ಹೋದ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ ನಡೆಸಲು ಅವರಿಬ್ಬರು ಮುಂದಾಗಿದ್ದರು. ದೂರು ನೀಡಿದ್ದ ಮಹಿಳೆಗೆ ಜಾತಿ ನಿಂದನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶುಕ್ರವಾರ ಸ್ಥಳಕ್ಕೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ನ್ನು ತೆರವುಗೊಳಿಸಿದ್ದಲ್ಲದೆ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾತಿನಿಂದನೆ ಕೇಸು
ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಅದನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲು ಹುನ್ನಾರ ನಡೆಸಿರುವುದನ್ನು ಕಂದಾಯ ಇಲಾಖೆಗೆ ದೂರು ನೀಡುವ ಮೂಲಕ ಮಮತಾ ರಾಗಿಕುಮೇರು ಎಂಬವರು ಬೆಳಕಿಗೆ ತಂದಿದ್ದರು. ಸ್ಥಳ ಪರಿಶೀಲನೆ ವೇಳೆ ಹಾಗೂ ಅಕ್ರಮ ಶೆಡ್ ತೆರವು ಸಂದರ್ಭದಲ್ಲಿ ಮಮತಾ ರಾಗಿಕುಮೇರು ಎಂಬವರಿಗೆ ರವೂಫ್ ಹಾಗೂ ಈತನ ತಮ್ಮ ರಶೀದ್ ಸೇರಿಕೊಂಡು ಜಾತಿ ನಿಂದನೆ ಮಾಡಿದ್ದು, ಇವರಿಬ್ಬರ ವಿರುದ್ಧ ಜಾತಿನಿಂದನೆಯ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಶೆಡ್ ತೆರವು ಹಾಗೂ ಸರ್ಕಾರಿ ಜಮೀನಿನ ವಶ ಕಾರ್ಯಾಚರಣೆಯ ನೇತೃತ್ವವನ್ನು ತಹಶೀಲ್ದಾರ್ ಆದೇಶದ ಮೇರೆಗೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರನಾಯಕ್ ವಹಿಸಿದ್ದರು. ಗ್ರಾಮ ಆಡಳಿತಾಧಿಕಾರಿ ಕವಿತಾ, ಗ್ರಾಮ ಸಹಾಯಕರಾದ ವೀರಪ್ಪ ಗೌಡ, ಮನೋಹರ್, ಪುರುಷೋತ್ತಮ, ಪುಷ್ಪರಾಜ್ ಹಾಗೂ ಪುತ್ತೂರು ನಗರಠಾಣೆಯ ಪೊಲೀಸ್ ಸಿಬಂದಿ ಭಾಗಿಯಾಗಿದ್ದರು.