
ಪುತ್ತೂರು: ಕಡಬ ತಾಲೂಕು ಕೊಲ ಗ್ರಾಮದ ಕೆ.ಸಿ ಫಾರ್ಮ್ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಮತ್ತು ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗಲಿರುವ ರಂಗಮಂದಿರ ಮತ್ತು ಭೋಜನ ಶಾಲೆ ನಿರ್ಮಾಣಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಲಾನ್ಯಾಸ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರಸ್ತುತ ಸರ್ಕಾರದಲ್ಲಿ ಅನುದಾನದ ಕೊರತೆ ಇದೆ, ತಾಲೂಕು ಪಂಚಾಯಿತಿ ಮೂಲಕ ಈಗಾಗಲೇ ಈ ಶಾಲೆಗೆ ರೂ.೫.೫೦ ಲಕ್ಷ ಅನುದಾನ ನೀಡಿದ್ದು, ಮುಂದಿನ ಡಿಸೆಂಬರ್ ಒಳಗೆ ಇನ್ನೂ ರೂ. ೫ ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪುತ್ಯೆ ಅವರು ಮಾತನಾಡಿ, ಈ ವರ್ಷ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ, ಇದರ ನೆನಪಿಗಾಗಿ ರಂಗಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ, ಇದಕ್ಕೆ ತಾವು ಕನಿಷ್ಠ ೫೦ರಿಂದ ೬೦ ಲಕ್ಷ ರೂಪಾಯಿ ಅನುದಾನ ಬೇಕಾಗಿದ್ದು, ಈಗಾಗಲೇ ರಂಗಮಂದಿರಕ್ಕೆ ತಾಪಂನಿಂದ ರೂ.೩.೫೦, ಭೋಜನ ಶಾಲಾ ಕಟ್ಟಡಕ್ಕೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ರೂ. ೬ ಲಕ್ಷ ಅನುದಾನ ಮಂಜೂರು ಆಗಿದೆ. ಉಳಿದಂತೆ ೫೦ ಲಕ್ಷ ರೂಪಾಯಿ ಅನುದಾನವನ್ನು ಶಾಸಕರು ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು.
ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ, ಸದಸ್ಯರಾದ ಹರ್ಷಿತ್ ಕುಮಾರ್, ಸಫೀಯ, ಪಿಡಿಒ ಸಂದೇಶ್ , ಶತಮಾನೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಷ್ ಶೆಟ್ಟಿ ಕೊಲ ಗ್ರಾ.ಪಂ ಕಾರ್ಯದರ್ಶಿ ಪಮ್ಮು, ಆತೂರು ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ, ಮಾಜಿ ಅಧ್ಯಕ್ಷ ಯದುಶ್ರೀ, ಕೊಲ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಮಾಜಿ ಸದಸ್ಯ ಸುದೀಶ್ ಪಟ್ಟೆ, ಗ್ಯಾರಂಟಿ ಯೋಜನೆ ಕಡಬ ತಾಲೂಕು ಸಮಿತಿ ಸದಸ್ಯ ಎ.ಕೆ. ಬಶೀರ್, ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಅನುಪಮ ಸ್ವಾಗತಿಸಿದರು. ಶಿಕ್ಷಕ ಲಂಕೇಶ್ ವಂದಿಸಿದರು.

























