‘ಸರಳ ಸುಬ್ಬರಾವ್’ ಭಾವನಾತ್ಮಕ ಪಯಣಕ್ಕೆ ಸಜ್ಜು!

ಈ ವಾರ ತೆರೆಗೆ

ಹಳೆಯ ಕಾಲದ ಸಂಸ್ಕೃತಿ, ಕುಟುಂಬ ಬಾಂಧವ್ಯ ಮತ್ತು ಮಧುರ ನೆನಪುಗಳನ್ನು ಹೊತ್ತು ತರುವ ‘ಸರಳ ಸುಬ್ಬರಾವ್’ ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಖ್ಯಾತ ಲೇಖಕಿ ತ್ರಿವೇಣಿ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿಕೊಂಡು ರೂಪುಗೊಂಡಿರುವ ಈ ಸಿನಿಮಾ, 1971ರ ಕಾಲಘಟ್ಟವನ್ನು ಜೀವಂತವಾಗಿ ಮೂಡಿಸುವ ಭರವಸೆಯನ್ನು ಮೂಡಿಸಿದೆ. ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರ ಫೆಬ್ರವರಿ 20ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

ರಿಯಾನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ ಈ ಚಿತ್ರವನ್ನು ಸದಭಿರುಚಿ ಚಿತ್ರಗಳ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಂಜು ಸ್ವರಾಜ್ ನಿರ್ದೇಶಿಸಿದ್ದಾರೆ. ನಾಯಕನಾಗಿ ಅಜೇಯ್ ರಾವ್ ಹಾಗೂ ನಾಯಕಿಯಾಗಿ ಮಿಶಾ ನಾರಂಗ್ ಅಭಿನಯಿಸಿದ್ದು, ಇವರ ಜೋಡಿ ಹೊಸ ಭಾವನೆಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯಲಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಕಾಲಘಟ್ಟದ ಮಧುರತೆಯನ್ನು ಪ್ರತಿಬಿಂಬಿಸುವ ಹಾಡುಗಳು ಈಗಾಗಲೇ ಮೆಚ್ಚುಗೆ ಪಡೆದಿವೆ. ಛಾಯಾಗ್ರಹಣವನ್ನು ಪ್ರದೀಪ್ ಪದ್ಮಕುಮಾರ್ ನಿರ್ವಹಿಸಿದ್ದು, ಸಂಕಲನವನ್ನು ಬಸವರಾಜ ಅರಸ್ ಮಾಡಿದ್ದಾರೆ. ಕಲಾ ನಿರ್ದೇಶನ ಅಮರ್ ಹಾಗೂ ನೃತ್ಯ ಸಂಯೋಜನೆಯನ್ನು ಮದನ್ ಮತ್ತು ಹರಿಣಿ ವಹಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅಜೇಯ್ ರಾವ್, ಮಿಶಾ ನಾರಂಗ್ ಜೊತೆಗೆ ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್, ವಿಜಯ್ ಚಂಡೂರ್ ಹಾಗೂ ರಘು ರಾಮನಕೊಪ್ಪ ಸೇರಿದಂತೆ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.

ಕುಟುಂಬದ ಬಂಧ, ಮಮತೆ, ಪ್ರೀತಿ ಮತ್ತು ಜೀವನ ಮೌಲ್ಯಗಳ ಸುತ್ತ ಹೆಣೆದಿರುವ ‘ಸರಳ ಸುಬ್ಬರಾವ್’ ಚಿತ್ರವು ಪ್ರೇಕ್ಷಕರಿಗೆ ಭಾವನಾತ್ಮಕ ಅನುಭವ ನೀಡಲಿದೆ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ. 1971ರ ಕಾಲಘಟ್ಟದ ಸೊಗಡನ್ನು ನೈಜವಾಗಿ ತೋರಿಸಲು ಚಿತ್ರತಂಡ ವಿಶೇಷ ಶ್ರಮವಹಿಸಿದ್ದು, ಈ ವಾರದ ಪ್ರಮುಖ ಕುಟುಂಬ ಚಿತ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.