ಸರಣಿ ಹತ್ಯೆಗಳಿಗೆ ದ್ವೇಷ ಭಾಷಣಗಳೇ ಕಾರಣ: ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲೇ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತ

ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕ ಯುವಕರ ಕೊಲೆಗೆ ದ್ವೇಷ ಭಾಷಣವೇ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತನೋರ್ವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಜಿಲ್ಲೆಯಲ್ಲಿನ ಮಳೆ ಅನಾಹುತದ ಹಿನ್ನೆಲೆಯಲ್ಲಿ ಆಗಮಿಸಿದ್ದ ಉಸ್ತುವಾರಿ ಸಚಿವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ದ್ವೇಷ ಭಾಷಣದ ವಿಚಾರವಾಗಿ ಪ್ರಶ್ನೆ ಕೇಳಿದ್ದರು. ಆ ಕೂಡಲೇ ಸಚಿವರ ಹಿಂದೆ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತ ಉಸ್ಮಾನ್ ಕಲ್ಲಾಪು, ಜಿಲ್ಲೆಯಲ್ಲಿರುವ ಎಲ್ಲ ಕೋಮು ಕೊಲೆಗಳಿಗೆ ದ್ವೇಷ ಭಾಷಣಗಳೆ ಕಾರಣ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶದ ಧ್ವನಿಯಲ್ಲೇ ಹೇಳಿದರು. ಈ ವೇಳೆ ಸಚಿವರು ಇದು ಪತ್ರಿಕೋಷ್ಟಿ? ಅವರನ್ನು ಹೊರಗೆ ಕಳಿಸಿ ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ಮಾನ್ ಕಲ್ಲಾಪು, ದ್ವೇಷ ಭಾಷಣಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಅದು ಯಾರೇ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಬ್ದುಲ್ ರಹಮಾನ್ ಕೊಲೆ ವಿಚಾರವಾಗಿ ನಾವು ನಮ್ಮ ಪರ ವಹಿಸಬೇಕೆಂದು ಕೇಳುತ್ತಿಲ್ಲ. ಆದರೆ ನ್ಯಾಯ ಕೊಡಿ ಎಂದಷ್ಟೇ ಕೇಳಿಕೊಳ್ಳುತ್ತಿದ್ದೇವೆ ಎಂದರು.