ಸರ್ಕಾರಿ ಭೂಮಿ ಕಬಳಿಕೆ ವಿರುದ್ಧ ರಮೇಶ್ ದೂರು

ಬೆಂಗಳೂರು, ಜು.೧-೩೫೦ ಕೋಟಿಗೂ ಹೆಚ್ಚು ಬೆಲೆಬಾಳುವ ಅತ್ಯಮೂಲ್ಯ ಸರ್ಕಾರಿ ಸ್ವತ್ತಿಗೆ ನಕಲಿ ದಾಖಲೆ ಸೃಷ್ಟಿಸಿ, ಪಹಣಿ ಕೂರಿಸಿಕೊಳ್ಳುವ ಪ್ರಯತ್ನದಲ್ಲಿರುವ ಪ್ರಭಾವೀ ನಾಯಕರ ಸರ್ಕಾರಿ ಭೂ ಕಬಳಿಕೆ ಹಗರಣ ಸಂಬಂಧ ಬಿಜೆಪಿ ನಾಯಕ ಎನ್.ಆರ್.ರಮೇಶ್ ದಾಖಲೆ ಸಮೇತ ದೂರು ಸಲ್ಲಿಸಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ನಗರದಲ್ಲಿಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರು ಸಲ್ಲಿಕೆ ಮಾಡಿದ ಅವರು, ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ ೧೯, ೨೦, ೨೧ ಮತ್ತು ೨೭ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯ ಯಲಚಗುಪ್ಪೆ ರಾಂಪುರ ಗ್ರಾಮದ ಸರ್ವೆ ನಂಬರ್ ೪ ರಲ್ಲಿರುವ ೬೧.೩೦ ಎಕರೆಗಳಷ್ಟು ವಿಸ್ತೀರ್ಣದ ಅತ್ಯಮೂಲ್ಯ ಸರ್ಕಾರಿ ಸ್ವತ್ತು ಪ್ರಸ್ತುತ ೩೫೦ ಕೋಟಿ ರೂ. ಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿದೆ.
ಒಟ್ಟು ೧೨೦.೩೭ ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತು ಇದ್ದು, ಇದರ ಪೈಕಿ ಒಟ್ಟು ೫೯.೦೭ ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತನ್ನು ವಿವಿಧ ಸರ್ಕಾರಿ ಯೋಜನೆಗಳಿಗೆಂದು ನೀಡಲಾಗಿದೆ. ಇನ್ನುಳಿದಂತೆ ೬೧.೩೦ ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ “ಸರ್ಕಾರಿ ಗೋಮಾಳ”ಪ್ರದೇಶವಾಗಿದೆ.


ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತಿನ ಮೇಲೆ ಕಾಕದೃಷ್ಟಿ ಬೀರಿರುವ ಪ್ರಭಾವೀ ರಾಜಕಾರಣಿಯೊಬ್ಬರು ತಮ್ಮ ಬೇನಾಮಿಗಳಾಗಿರುವ ಚನ್ನನರಸಿಂಹಯ್ಯ, ಚಿಕ್ಕ ಹನುಮಂತರಾಯಪ್ಪ ಮತ್ತು ಗಂಗರಾಜು ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದೂ ಅಲ್ಲದೇ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿರುವ ಕಲವೊಂದುಅಧಿಕಾರಿ, ನೌಕರರುಗಳ ಸಹಾಯದಿಂದ ಕಾನೂನು ಬಾಹಿರವಾಗಿ “ಪಹಣಿ”ಯನ್ನು ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.


ಅಷ್ಟರಲ್ಲಾಗಲೇ, ಪ್ರಭಾವೀ ರಾಜಕಾರಣಿಯೊಬ್ಬರ ಪ್ರಭಾವಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದು ಚನ್ನೇನಹಳ್ಳಿ ಗ್ರಾಮದ ಸರ್ವೆ ನಂ: ೨೧ ರಲ್ಲಿರುವ ೪ ಎಕರೆ ಸರ್ಕಾರಿ ಸ್ವತ್ತನ್ನು ಚನ್ನನರಸಿಂಹಯ್ಯ ಬಿನ್ ಗಂಗಪ್ಪ ಎಂಬಾತನ ಹೆಸರಿಗೆ ಪಹಣಿ ಮಾಡಿಕೊಟ್ಟು ಸರ್ಕಾರಕ್ಕೆ ದೊಡ್ಡ ವಂಚನೆಯನ್ನು ಮಾಡಿದ್ದಾರೆ.

ಈಗಾಗಲೇ ಚನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ ೧೯, ೨೦, ೨೧ ಮತ್ತು ೨೭ ಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ಜೊತೆ ಮೌಖಿಕವಾಗಿ ಮಾತನಾಡಿದ ನಂತರ ಅವರು ಎಲ್ಲಾ ಪ್ರಸ್ತಾವನೆಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.


ಹೀಗಾಗಿ, ಆದ ಕಾರಣ ಇಂತಹ ಅತ್ಯಮೂಲ್ಯ ಸ್ವತ್ತನ್ನು ಕಾನೂನು ಬಾಹಿರವಾಗಿ ತಮ್ಮದಾಗಿಸಿಕೊಳ್ಳುವ ಹಲವಾರು ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿರುವ ಎಲ್ಲ ರಾಜಕೀಯ ಪ್ರಭಾವಿಗಳು ಸರ್ಕಾರಿ ನೆಲಗಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.