Home ಜಿಲ್ಲೆ ಮೈಸೂರು ಸಮ ಸಮಾಜ ನಿರ್ಮಾಣ ಮಹನೀಯರ ಆಶಯ

ಸಮ ಸಮಾಜ ನಿರ್ಮಾಣ ಮಹನೀಯರ ಆಶಯ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.23:-
ಜಾತಿ ರಹಿತ ಸಮ ಸಮಾಜ ನಿರ್ಮಾಣ ಮಹಾನ್ ವ್ಯಕ್ತಿಗಳ ಆಶಯವಾಗಿದ್ದು, ಅವರ ಜಯಂತಿಗಳ ಆಚರಣೆಯ ಮೂಲಕ ಸಮಾಜಕ್ಕೆ ತಿಳಿಸಲಾಗುತ್ತಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ.ಎಂ ಹೇಳಿದರು.

ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸಂತ ಸೇವಾಲಾಲ್ ಜಯಂತೋತ್ಸವ ಸಮಿತಿ ವತಿಯಿಂದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಜಾತಿಗಳು ಮತ್ತು ಸಂಘಟನೆಗಳು ಗಟ್ಟಿಯಾಗಲು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಲು ಜಯಂತಿಗಳನ್ನು ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಂಘಟನೆಗಳು ಉತ್ತಮ ಸಮಾಜ ನಿರ್ಮಾಣ ಮಾಡಲು ಮಹಾನ್ ವ್ಯಕ್ತಿಗಳ ಜೀವನದ ತತ್ವ ಮತ್ತು ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕು. ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಮಂಜೇಗೌಡ ಮಾತನಾಡಿ, ಸಂತ ಸೇವಾಲಾಲ್ ಸಾಮಾಜಿಕ, ಧಾರ್ಮಿಕ ಸುಧಾರಕರಾಗಿದ್ದರು. ಇವರನ್ನು ಗುರು ಬಂಜಾರ್ ಸಮುದಾಯದ ಆಧ್ಯಾತ್ಮಿಕ ಗುರುಗಳು ಎಂದು ಕರೆಯಲಾಗುತ್ತದೆ. ಸಂತ ಸೇವಾಲಾಲ್ ಅವರು ಪಶು ಸಂಗೋಪನೆಯಲ್ಲಿ ತಮ್ಮ ಕಾರ್ಯವನ್ನು ತೊಡಗಿಸಿಕೊಂಡಿದ್ದರು. ಇವರ ಹೆಸರಿನಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್.ಟಿ ಮಾತನಾಡಿ, ಬಂಜಾರರ ಆರಾಧ್ಯ ದೈವ, ಕುಲಗುರು, ನಮ್ಮ ಭಾಷೆಯ ನೆರಳು, ಕ್ರಾಂತಿಕಾರಿ ಆದಂತಹ 287ನೇ ಸಂತ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಬಂಜಾರ ಜನಾಂಗದ ಇತಿಹಾಸದ ಮೂಲ ಮತ್ತು ಬೆಳವಣಿಗೆಯ ಬಗ್ಗೆ ಗಮನಿಸುವುದಾದರೆ ಕ್ರಿಸ್ತಪೂರ್ವ 3500 ಮತ್ತು ಕ್ರಿಸ್ತಪೂರ್ವ 5,000 ವರ್ಷಗಳ ಹಿಂದಿನಿಂದಲೂ ಬಂಜಾರ ಇತಿಹಾಸವನ್ನು ಸಿಂಧೂ ನಾಗರಿಕತೆಯೊಂದಿಗೆ ಬೆಳೆದು ಬಂದಿದೆ. 18 ಶತಮಾನದ ಮಧ್ಯಭಾಗದ ವರೆಗೂ ಜನಾಂಗಕ್ಕೆ ಸ್ಪಷ್ಟ ಮಾರ್ಗದರ್ಶನವನ್ನು ನೀಡಿದವರೆಂದರೆ ಅದು ಸಂತ ಸೇವಾಲಾಲ್ ಎಂದು ಹೇಳಿದರು.
11ನೇ ಶತಮಾನದ ಕಾಲಘಟ್ಟದಲ್ಲಿ ಅಂಧಕಾರದಲ್ಲಿದ್ದ ಬಂಜಾರ ಸಮಾಜಕ್ಕೆ ಮಾರ್ಗದರ್ಶಕರು ಇಲ್ಲದಂತಹ ವೇಳೆಯಲ್ಲಿ ಹುಣ್ಣಿಮೆ ಚಂದ್ರನಂತೆ ಜನಾಂಗಕ್ಕೆ ದಾರಿ ದೀಪವಾಗಿ ಬಂಜಾರ ಜನಾಂಗದ ಆಶಾಕಿರಣವಾಗಿ ಜನ್ಮ ತಾಳಿದವರು ಸಂತ ಸೇವಾಲಾಲ್. ಸೇವಾಲಾಲ್ ಅವರು ಒಬ್ಬ ಆರ್ಥಿಕ ತಜ್ಞ, ವಿಚಾರವಾದಿ, ಅಹಿಂಸವಾದಿ, ಸಂಘಟಕ ಎಂದು ಹೇಳಿದರು.

ಇದೇ ವೇಳೆ ವಿನೋದ್.ಆರ್.ಬಿ ಬರೆದಿರುವ ಶ್ರೀ ಸೇವಾ ಚರಿತಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕೃಷ್ಣಾಪುರದ ಬಂಜಾರ ಗುರುಪೀಠದ ಕುಮಾರ್ ಮಹಾರಾಜ್, ವಿಜಯನಗರ ಕೊಟ್ಟೂರು ತಾಲೂಕಿನ ಶಕ್ತಿ ಪೀಠದ ಶಿವಪ್ರಕಾಶ್ ಮಹಾರಾಜ್, ಬಂಜಾರ ಸೇವಾ ಸಂಘದ ಅಧ್ಯಕ್ಷ ಎಂ.ಸುಂದರ್, ಉಪಾಧ್ಯಕ್ಷ ತೇಜು ನಾಯಕ, ಕಾರ್ಯದರ್ಶಿ ಅನಿಲ್.ಎಂ, ಸಂಘದ ಜಂಟಿ ಕಾರ್ಯದರ್ಶಿ ಪಿ.ಜಯರಾಮ್, ಕಾವೇರಿ ಬಾಯ್ ಉಪಸ್ಥಿತರಿದ್ದರು.