
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.07: ಬಾಬು ಜಗಜೀವನರಾಂ ಅವರು ಬುದ್ಧ, ಬಸವ, ಅಂಬೇಡ್ಕರರಂತೆ ಸಮಾಜ ಸುಧಾರಣೆಯ ಧೋರಣೆಗಳನ್ನು ಸದಾಕಾಲ ಹೊಂದಿದ್ದರು ಎಂದು ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಹೇಳಿದರು.
ಇಲ್ಲಿನ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ವಿವಿಯ ಬಾಬು ಜಗಜೀವನರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಪ.ಜಾ/ ಪ.ಪಂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಶೋಧನಾ ವಿಧಾನ’ ಕಾರ್ಯಾಗಾರವನ್ನು ಗಣ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಳ್ಳಾರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮೌಢ್ಯ ಆಚರಣೆಯ ಪದ್ಧತಿಗಳಾದ ದೇವದಾಸಿ, ಜಾತಿ ಪದ್ಧತಿ, ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಂತಹ ಹಲವಾರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಅವುಗಳ ನಿರ್ಮೂಲನೆಗೆ ನಿರಂತರ ಹೋರಾಟ ಮಾಡಿದ್ದನ್ನು ಸ್ಮರಿಸಿದರು. ಸಂಶೋಧನಾ ವಿದ್ಯಾರ್ಥಿಗಳು ಬಾಬು ಜಗಜೀವನರಾಂ ಅವರ ಜೀವನ ಸಾಧನೆಯನ್ನು ಅಧ್ಯಯನ ಮಾಡಿ, ಅವರಲ್ಲಿದ್ದ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲಿಡ್ಕರ್ ಅಭಿವೃದ್ಧಿ ನಿಗಮವು ತನ್ನ ಅಧೀನಕ್ಕೆ ಒಳಪಡುವ ಉಪಜಾತಿಗಳ ಫಲಾನುಭವಿಗಳಿಗೆ, ಮಹಿಳೆಯರಿಗೆ ವಿಶೇಷ ತರಬೇತಿ ನೀಡುವುದು, ವಿವಿಧ ಕೌಶಲ್ಯಗಳ ತರಬೇತಿಗೆ ಬೆಂಗಳೂರು, ತಮಿಳುನಾಡು ಹಾಗೂ ಇಂಡೋನೇಷ್ಯಾ ದೇಶಕ್ಕೆ ಕಳಿಸಿ ಕೈಗಾರಿಕಾ ತರಬೇತಿ ಒದಗಿಸುತ್ತದೆ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಬಿ ಎಚ್ ಅನಿ¯ಕುಮಾರ್ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಸಂಶೋಧನೆಗೆ ಎಐ ಮತ್ತು ಮಷಿನ್ ಲರ್ನಿಂಗ್‍ನಂತಹ ಸಾಧನಗಳನ್ನು ಬಳಸುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಯಾವುದೇ ಮಾದರಿಯ ಸಂಶೋಧನೆಗೆ ವಸ್ತುನಿಷ್ಠತೆ, ನಿರ್ದಿಷ್ಟ ಉದ್ದೇಶಗಳು ಹಾಗೂ ನೀತಿ ಸಂಹಿತೆ ಪಾಲಿಸಬೇಕು. ಸಂಶೋಧನೆಯಲ್ಲಿ ನೈಜವಾದ ದತ್ತಾಂಶಗಳು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದರು.
ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ರಾಜ್ಯದ ಬಹುತೇಕ ವಿವಿಗಳಲ್ಲಿರುವ ಅಧ್ಯಯನ ಪೀಠಗಳು ಹೆಸರಿಗಷ್ಟೇ ಸೀಮಿತವಾಗಿವೆ. ಪೀಠಗಳು ಆಳವಾದ ಮತ್ತು ಸ್ಥೂಲವಾದ ಉತ್ಕೃಷ್ಟ ಸಂಶೋಧನೆಯನ್ನು ಹೊರ ತರಲು ಮುಂದಾಗಬೇಕು ಎಂದು ತಿಳಿಸಿದರು. ಬಾಬು ಜಗಜೀವನರಾಂ ಅವರ ಕುರಿತು ಅತ್ಯುತ್ತಮ ಸಂಶೋಧನಾ ಲೇಖನ ಮಂಡಿಸುವ ಸಂಶೋಧನಾ ವಿದ್ಯಾರ್ಥಿಗೆ ಪೀಠದ ವತಿಯಿಂದ 10 ಸಾವಿರ ರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು. ವಿವಿಯ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ವರ್ಷಕ್ಕೆ ಒಂದು ಲಕ್ಷ ರೂ ವ್ಯಯಿಸಲು ಕಾರ್ಯಯೋಜನೆ ಸಿದ್ಧಪಡಿಸುವಂತೆ ಪೀಠದ ಸಂಯೋಜಕರಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಕಾರ್ಯಾಗಾರದ ಸಂಯೋಜಕರಾದ ಡಾ. ತಿಪ್ಪೇಸ್ವಾಮಿ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಡಾ ಸುಷ್ಮಾ ಜೋಗನ್ ನಿರೂಪಿಸಿದರು. ಡಾ ಸಂತೋಷ ಅತಿಥಿಗಳನ್ನು ಸ್ವಾಗತಿಸಿದರು. ಸಂಶೋಧನಾರ್ಥಿ ನರಸಿಂಹ ವಂದಿಸಿದರು.
ಪ.ಜಾ/ಪ.ಪಂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಶೋಧನಾ ವಿಧಾನ ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು, ಸಂಶೋಧನಾ ಕ್ಷೇತ್ರದ ಪರಿಣಿತರು ಉಪನ್ಯಾಸ ನೀಡಲಿದ್ದಾರೆ.
ವಿವಿಯ ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.




















