ಸಮಗ್ರ ಕೃಷಿ ಈಗಿನ ಅನಿವಾರ್ಯತೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.11:-
ಓದಿದವರಿಗೆಲ್ಲ ಕೈಗಾರಿಕೆಗಳಲ್ಲಿ ಕೆಲಸ ದೊರೆಯುತ್ತಿಲ್ಲ. ಸರ್ಕಾರಿ ಹುದ್ದೆಗಳು ಸಿಗುವುದು ಕಷ್ಟವಾಗಿದ್ದು, ವಿದ್ಯಾವಂತರು ಉದ್ಯೋಗಿಗಳಾಗುವ ಬದಲು ಕೃಷಿ ಉದ್ದಿಮೆದಾರರಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.


ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಡಾ.ವಸಂತಕುಮಾರ್ ತಿಮಕಾಪುರ ಅವರ ವಸಂತ ವಿಹಾರ, ಪ್ಲಾಂಟ್ ಡಾಕ್ಟರ್ ಕೃತಿ ಬಿಡುಗಡೆ ಮತ್ತು ವಸಂತೋತ್ಸವ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಹಳಷ್ಟು ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಉದ್ಯೋಗಕ್ಕಿಂತ ಕೃಷಿ ಉದ್ಯಮ ಸ್ಥಾಪಿಸಿ. ಇದಕ್ಕೆ ಖರ್ಚು-ವೆಚ್ಚ ಕಡಿಮೆ. ಕೃಷಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸಿಗುವ ಅನೇಕ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಕೃಷಿ ಕೈಗಾರಿಕೋದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಸಮಗ್ರ ಕೃಷಿ ಈಗಿನ ಅನಿವಾರ್ಯತೆ. ನಗರೀಕರಣ, ಬಡಾವಣೆ ನಿರ್ಮಾಣ ಸೇರಿದಂತೆ ವಿವಿಧ ಚಟುವಟಿಕೆಗಳಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಈಗಿರುವ ಸೀಮಿತ ಕೃಷಿ ಕಾರ್ಯ ಕ್ಷೇತ್ರದಲ್ಲೇ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕಾಗಿದೆ. ಪ್ರಕೃತಿಯಿಂದ ಕೃಷಿ ಕ್ಷೇತ್ರದ ಮೇಲೆ ಆಗುತ್ತಿರುವ ಸವಾಲುಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ವಿಜ್ಞಾನ, ಸಂಶೋಧನೆ, ತಂತ್ರಜ್ಞಾನ, ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಜಂಟಿಯಾಗಿ ಮುನ್ನಡೆಯಬೇಕಾಗಿದೆ ಎಂದರು.


ರೈತನ ಮಗನಾದರೂ ನನಗೆ ಕೃಷಿ ಅಷ್ಟಾಗಿ ಅರ್ಥವಾಗಿರಲಿಲ್ಲ. ಅದರ ಕುರಿತು ಸೀಮಿತ ಜ್ಞಾನ ಮಾತ್ರ ಇತ್ತು. ಕೃಷಿ ಸಚಿವನಾದ ಬಳಿಕ ಬಹಳಷ್ಟು ತಿಳಿದುಕೊಂಡಿವೆ. ಕೃಷಿ ಕ್ಷೇತ್ರಕ್ಕೆ ಮೊದಲ ಆದ್ಯತೆ ಕೊಡದಿದ್ದರೆ ಭವಿಷ್ಯ ಕಷ್ಟಕರವಾಗಲಿದೆ ಎಂದು ಎಚ್ಚರಿಸಿದರು.


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎ.ಎಚ್.ರಾಜಾಸಾಬ್ ಮಾತನಾಡಿ, ಕೃಷಿ ಬೆಳೆಗಳಿಗೆ ವಿವಿಧ ಕಾರಣಕ್ಕೆ, ವಿವಿಧ ಆಯಾಮಗಳಲ್ಲಿ ರೋಗಗಳು ಬರುತ್ತಿವೆ. ಈ ಕುರಿತು ರೈತರಿಗೆ ಅರಿವು ಮೂಡಿಸಿ, ಅವುಗಳ ಹತೋಟಿಗೆ ಕ್ರಮವಹಿಸಬೇಕು. ವಸಂತಕುಮಾರ್ ತಿಮಕಾಪುರ ಅವರು ಕೃಷಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಹೈದರಾಬಾದ್‍ನ ಇಕಿಸ್ಯಾಟ್ ನಿವೃತ್ತ ಉಪ ಮಹಾನಿರ್ದೇಶಕ ಡಾ.ಸಿ.ಎಲ್.ಲಕ್ಷ್ಮೀಪತಿ ಗೌಡ, ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪೆÇ್ರ.ಎನ್.ನಾಗರಾಜ, ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪೆÇ್ರ.ಎಸ್.ಉಮೇಶ್, ಬಿಜೆಪಿಯ ಆರ್.ರಘು ಕಾರ್ಯಕ್ರಮದಲ್ಲಿ ಹಾಜರಿದ್ದರು.