ಸಧ್ಯಕ್ಕೆ ಅನಾನುಕೂಲ ಮುಂದೆ ಅನುಕೂಲ: ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.02:
ನಗರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದ ಜನರಿಗೆ ಸದ್ಯಕ್ಕೆ ಅನಾನುಕೂಲ ಆಗುತ್ತಿರುವುದು ನಿಜ, ಇನ್ನೂ ಆರು ತಿಂಗಳು ಜನರು ಕಷ್ಟವನ್ನು ಸಹಿಸಿಕೊಳ್ಳಬೇಕು, ಏಕೆಂದರೆ ಈಗ ಸಾಕಷ್ಟು ಕಾಮಗಾರಿಗಳು ಮತ್ತೆ ಆರಂಭ ಆಗಲಿವೆ. ಮುಂದೆ ಕಾಮಗಾರಿಗಳು ಮುಗಿದ ಮೇಲೆ ಜನಕ್ಕೆ ಹೆಚ್ಚಿನ ಅನುಕೂಲ ಆಗಲಿದೆಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ನಗರದ ವಿವಿಧಡೆ ಹಲವ೭ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ನಗರದಲ್ಲಿ ಮೂರು ಹಂತಗಳಲ್ಲಿ ಒಟ್ಟು 84 ಕೋಟಿ ರೂ.ಗಳ ಅನುದಾನ ತರಲಾಗಿದ್ದು, ಇವುಗಳ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ, ಬೆಳಗಾವಿ ಅಧಿವೇಶನದ ನಂತರ ಮತ್ತೆ 3 ಕೋಟಿ ರೂ.ಗಳ ಅನುದಾನದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಕೊಟ್ಟ ಮಾತಿನಂತೆ ಬಳ್ಳಾರಿಯನ್ನು ಸುವರ್ಣ ಬಳ್ಳಾರಿಯಾಗಿ ಮಾಡಲಿದೆಂದರು.
ಜ.3ರಂದು ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಆಗಲಿದೆ, ಇದರಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್.ರಾಜಣ್ಣ, ಸಚಿವ ಜಮೀರ್ ಅಹ್ಮದ್, ಸಂಸದ ತುಕಾರಾಂ, ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ರಾಜ್ಯದ ಜಿಲ್ಲೆಯ ಎಸ್ಟಿ ಸಮುದಾಯದ ಶಾಸಕರು ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಇದಕ್ಕೂ ಮುನ್ನ 23ನೇ ವಾರ್ಡಿನ ಮಹಾನಂದಿಕೊಟ್ಟಂನಲ್ಲಿ ಮಹಾತ್ಮ ಗಾಂಧಿ ನಗರ ಯೋಜನೆ ಅಡಿ 2.50 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಾರಿಗೆ, 21ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಅಂದಾಜು 4 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ, 15ನೇ ವಾರ್ಡಿನ ವಡ್ಡರ ಬಂಡೆಯ ಬಳಿ ಅಂದಾಜು ವೆಚ್ಚ 2 ಕೋಟಿ ರೂ.ಗಳಲ್ಲಿ, ಅದೇ ರೀತಿ ವಾರ್ಡ್ ಸಂಖ್ಯೆ 16ರ ಶ್ರೀರಾಂಪುರ ಕಾಲೋನಿಯಲ್ಲಿ 2.80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮೇಯರ್ ಪಿ.ಗಾದೆಪ್ಪ, ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಹೆಚ್.ತಿಮ್ಮನಗೌಡ, ಮಿಂಚೇರಿ ನರೇಂದ್ರಬಾಬು,
ಮಾಜಿ ಮೇಯರ್ ರಾಜೇಶ್ವರಿ, ಸದಸ್ಯರಾದ ಸುರೇಖಾ ಮಲ್ಲನಗೌಡ ಮುಖಂಡರಾದ ಟಿ.ವಿ.ಪ್ರಸಾದ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸೋಮಶೇಖರ್, ಯಾಳ್ಪಿ ಪಂಪನಗೌಡ, ಜಾನೆಕುಂಟೆ ಬಸವರಾಜ್(ಕುಮ್ಮಿ) ಮೀನಳ್ಳಿ ಚಂದ್ರಶೇಖರ್, ಬಿಸಿಲಹಳ್ಳಿ ಮಂಜು, ಶಂಕರ್, ಹಿರೇಮಠ ಸೇರಿದಂತೆ ಹಲವರು ಇದ್ದರು.