Home ಜಿಲ್ಲೆ ಮಂಗಳೂರು ಸತ್ಯಕ್ಕೆ ಸಂದ ಜಯ-೯ ವರ್ಷಗಳ ಪ್ರಯತ್ನಕ್ಕೆ ಫಲ;ಗ್ರಾಪಂ ಆಡಳಿತದ ವಿರುದ್ಧ ‘ಏಕವ್ಯಕ್ತಿ’ ಹೋರಾಟ

ಸತ್ಯಕ್ಕೆ ಸಂದ ಜಯ-೯ ವರ್ಷಗಳ ಪ್ರಯತ್ನಕ್ಕೆ ಫಲ;ಗ್ರಾಪಂ ಆಡಳಿತದ ವಿರುದ್ಧ ‘ಏಕವ್ಯಕ್ತಿ’ ಹೋರಾಟ

oplus_2

ಪುತ್ತೂರು; ಗ್ರಾಮಪಂಚಾಯತ್ ಒಂದರಲ್ಲಿ ಹಣದ ಅವ್ಯವಹಾರ ಮತ್ತು ಅಧಿಕಾರದ ದುರ್ಬಳಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಕೃಷಿಕ ದಂಪತಿಗಳನ್ನು ಜೈಲು ಪಾಲು ಮಾಡಲು ಹುನ್ನಾರ ನಡೆಸಿದ್ದ ಪಂಚಾಯತ್ ಆಡಳಿತ ಮಂಡಳಿಯ ಪ್ರಯತ್ನ ವಿಫಲವಾಗಿದ್ದು, ಸತತ ೯ ವರ್ಷಗಳ ನಿರಂತರ ಹೋರಾಟದಿಂದ ಇದೀಗ ಸತ್ಯಕ್ಕೆ ಜಯ ದೊರಕಿದೆ. ಇದು ಕಾಣಿಯೂರು ಗ್ರಾಮದ ಬೊಬ್ಬೆಕೇರಿಯ ಮಲೆಕೆರ್ಚಿ ನಿವಾಸಿ ರುಕ್ಮಯ್ಯ ಗೌಡ ಹೋರಾಟದ ಕಥೆ.
೨೦೧೬ರಲ್ಲಿ ಕಾಣಿಯೂರು ಗ್ರಾಪಂ ಆಡಳಿತ ಮಂಡಳಿ ಹಣದ ಅವ್ಯವಹಾರ ನಡೆಸಿದೆ ಎಂಬುವುದನ್ನು ದಾಖಲೆ ಸಮೇತ ರುಕ್ಮಯ್ಯ ಗೌಡ ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ದೂರಿನಲ್ಲಿ ಸತ್ಯಾಂಶ ಇದೆ ಎಂದು ಮನವರಿಕೆಯಾದ ಲೋಕಾಯುಕ್ತ ಅಧಿಕಾರಿಗಳ ಸ್ಥಳ ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಇದರ ಪರಿಣಾಮ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯೋಗಿನಿ ಶೆಟ್ಟಿ ಮತ್ತು ಉಪಾಧ್ಯಕ್ಷೆ ಕಮಲಾಕ್ಷಿ ಸೇರಿದಂತೆ ಇಡೀ ಗ್ರಾಪಂ ಆಡಳಿತ ಈ ಬಡಪಾಯಿ ವಿರುದ್ಧ ಮುಗಿಬಿದ್ದಿತ್ತು. ಇದರ ಪರಿಣಾಮ ಗ್ರಾಪಂ ಆಡಳಿತ ಮಂಡಳಿ ರುಕ್ಮಯ್ಯ ಗೌಡರು ಕೃಷಿ ಜಮೀನಿನ ಕೊಳವೆಬಾವಿಗೆ ಕುಡಿಯುವ ನೀರು ಸರಬರಾಜಿಗಾಗಿ ಹಾಕಲಾಗಿದ್ದ ೧.೫ ಎಚ್‌ಬಿ ಪಂಪ್‌ನ್ನು ಅಕ್ರಮ ಎನ್ನುವ ನೆಪದಲ್ಲಿ ತೆಗೆದುಕೊಂಡು ಹೋಗಿ ಗ್ರಾಪಂ ಕಚೇರಿಯಲ್ಲಿಟ್ಟರು. ಅಷ್ಟೇ ಸಾಕಾಗದು ಎಂಬಂತೆ ರುಕ್ಮಯ್ಯ ಗೌಡ ಹಾಗೂ ಅವರ ಪತ್ನಿ ಮೇಲೆ ಎರಡು ಕ್ರಿಮಿನಲ್ ಕೇಸನ್ನು ಬೆಳ್ಳಾರೆ ಠಾಣೆಯಲ್ಲಿ ದಾಖಲಿಸಿ ಈ ದಂಪತಿಯನ್ನು ಜೈಲಿಗಟ್ಟುವ ಷಡ್ಯಂತ್ರ ಮಾಡಿದರು.
ಇಲ್ಲಿಂದ ರುಕ್ಮಯ್ಯ ಗೌಡರ ಏಕವ್ಯಕ್ತಿ ಹೋರಾಟ ಆರಂಭಗೊಂಡಿತು. ಕಳೆದ ೯ ವರ್ಷಗಳ ಹೋರಾಟದ ಫಲವಾಗಿ ವೈಯುಕ್ತಿಕ ಧ್ವೇಷದಿಂದ ದಾಖಲಾದ ಪ್ರಕರಣ ಎಂದು ಪರಿಗಣಿಸಿ ಈ ಎರಡೂ ಪ್ರಕರಣಗಳು ಸುಳ್ಯ ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ಇದೀಗ ಆರೋಪ ಮುಕ್ತರಾದ ಈ ದಂಪತಿಗಳಿಗೆ ಸತ್ಯಕ್ಕೆ ದೊರೆತ ನ್ಯಾಯ ಇದಾಗಿದೆ ಎಂಬ ನೆಮ್ಮದಿ ದೊರೆತಿದೆ. ಈ ನಡುವೆ ಗ್ರಾಪಂ ಆಡಳಿತ ನಡೆಸಿದ ಅವ್ಯವಹಾರದ ಪ್ರಕರಣ ಬೆಂಗಳೂರಿನಲ್ಲಿ ವಿಚಾರಣಾ ಹಂತದಲ್ಲಿದೆ. ಗ್ರಾಪಂನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಫಲವಾಗಿ ನಾನಾ ಕಿರುಕುಳಗಳನ್ನು ಅನುಭವಿಸಿದರೂ ಎದೆಗುಂದದೆ ನಡೆಸಿದ ಹೋರಾಟದ ಫಲ ಸಾರ್ವಜನಿಕರಿಗೂ ಗೊತ್ತಾಗಬೇಕು. ಮತ್ಯಾರಿಗೂ ಈ ರೀತಿಯ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಮಾದ್ಯಮಗಳ ಮುಂದೆ ಅವರು ತಮ್ಮ ಹೋರಾಟದ ಕಥೆಯನ್ನು ಬಿಚ್ಚಿಟ್ಟರು.
೧೭ ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡುತ್ತಾ ಬದುಕುತ್ತಿದ್ದ ರುಕ್ಮಯ್ಯ ಗೌಡ ಅವರು ನಡೆಸಿದ ಏಕವ್ಯಕ್ತಿ ಹೋರಾಟದಲ್ಲಿ ನ್ಯಾಯ ಸಿಗಲು ಸಾಕಷ್ಟು ಪರದಾಟ ನಡೆಸಿದ್ದಾರೆ. ಆರ್ಥಿಕವಾಗಿಯೂ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಎಕರೆಗಟ್ಟಲೆ ಭೂಮಿಯನ್ನು ಖರೀದಿಸುವ ಹಣ ಕೇವಲ ಈ ಕಾನೂನು ಹೋರಾಟಕ್ಕಾಗಿ ವ್ಯಯವಾಗಿದೆ. ಹಾಗಿದ್ದರೂ ಯಾವುದೇ ಹಂತದಲ್ಲಿ ರಾಜೀ ಮಾಡಿಕೊಳ್ಳದೆ ನಡೆಸಿದ ಹೋರಾಟ ಇದೀಗ ಫಲ ಕೊಟ್ಟಿದೆ. ಇದೀಗ ನೀರಿನ ಪಂಪು ತೆಗೆದ ಪರಿಣಾಮ ಉಂಟಾದ ನಷ್ಟಕ್ಕೆ ಪರಿಹಾರ ಕೊಡಿಸುವಂತೆ ಪುತ್ತೂರು ನ್ಯಾಯಾಲಯದಲ್ಲಿ ಗ್ರಾಪಂ ವಿರುದ್ಧ ದಾವೆ ಹೂಡಿದ್ದಾರೆ.
ನನಗೆ ನೆಮ್ಮದಿ ಕೊಟ್ಟಿದೆ..
ನಾನು ತುಂಬಾ ಕಷ್ಟಪಟ್ಟಿದ್ದೇನೆ. ಕುಡಿಯುವ ನೀರಿಲ್ಲದೆ ನನ್ನ ೫೦ ಸಾವಿರ ಬೆಲೆಯ ಎರಡು ದನಗಳನ್ನು ಕಳೆದುಕೊಂಡಿದ್ದೇನೆ. ಕುಟುಂಬದ ಬದುಕಿಗಾಗಿ ನೆಟ್ಟಿದ್ದ ಸುಮಾರು ೩೦೦ರಷ್ಟು ಅಡಿಕೆ ಗಿಡಗಳಿಗೆ ನೀರಿಲ್ಲದೆ ಸತ್ತು ಹೋಗಿವೆ. ಒಂದು ಹಂತದಲ್ಲಿ ನನ್ನನ್ನು ವಿಲನ್ ಮಾಡುವ ನಿರಂತರ ಪ್ರಯತ್ನ ನಡೆಸಿದರು. ಸಾಕಷ್ಟು ತೊಂದರೆ ಕೊಟ್ಟರು. ಸುಳ್ಳು ದೂರಿನಲ್ಲಿ ನಮ್ಮನ್ನು ಜೈಲಿಗಟ್ಟಲು ಪ್ರಯತ್ನ ಪಟ್ಟರು. ಆದರೂ ನಾನು ನ್ಯಾಯಾಲಯವನ್ನು ನಂಬಿ ಹೋರಾಟ ಮಾಡಿದೆ. ನಂಬಿಕೆ ಸುಳ್ಳಾಗಲಿಲ್ಲ. ಈಗ ನ್ಯಾಯ ಸಿಕ್ಕಿದೆ. ನನಗೆ ನೆಮ್ಮದಿ ಕೊಟ್ಟಿದೆ- ರುಕ್ಮಯ್ಯ ಗೌಡ ಮಲೆಕೆರ್ಚಿ ಸಾಮಾಜಿಕ ಹೋರಾಟಗಾರ.