Home ಜಿಲ್ಲೆ ಮಂಗಳೂರು ಸಣ್ಣ ಭಾಷೆಗಳು ಪತನಮುಖಿಯಾದರೆ ಸಂಸ್ಕೃತಿ ದುರ್ಬಲವಾದಂತೆ – ಡಾ. ಬಿಳಿಮಲೆ

ಸಣ್ಣ ಭಾಷೆಗಳು ಪತನಮುಖಿಯಾದರೆ ಸಂಸ್ಕೃತಿ ದುರ್ಬಲವಾದಂತೆ – ಡಾ. ಬಿಳಿಮಲೆ

ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ – ವಿಚಾರಗೋಷ್ಠಿ
ಸುಳ್ಯ:ಸಣ್ಣ ಭಾಷೆಗಳು ಪತನಮುಖಿಯಾದರೆ ಆಯಾ ಪ್ರದೇಶದ ಸಂಸ್ಕೃತಿ ದುರ್ಬಲವಾದಂತೆ. ಎಲ್ಲ ಭಾಷೆಗಳೂ ಉಳಿದ ಏಕ ಭಾರತವೇ ಚೆಂದ. ಏಕ ಭಾಷೆಯೆಡೆಗೆ ಚಲಿಸಿದರೆ ಭಾರತ ಬಡವವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ , ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಬುಧವಾರ ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ” ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ ” ಕುರಿತಾದ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಆಶಯ ಭಾಷಣ ಮಾಡಿದರು.
ಎಲ್ಲಾರು ನಮ್ಮದೇ ಭಾಷೆ ಎಂಬ ಭಾವದಲ್ಲಿ ಕೆಲಸ ಮಾಡಿದಾಗ ಭಾಷೆಯ ಬಗೆಗೆ ಪ್ರೀತಿ, ಮೋಹ ಹೆಚ್ಚಾಗುತ್ತದೆ. ಪ್ರಭುತ್ವದ ಭಾಷೆ ಕನ್ನಡ ಆಡಳಿತದ ಭಾಷೆಯೂ ಆದಾಗ ಹೆಚ್ಚು ಜನರನ್ನು ತಲುಪುತ್ತದೆ. ಭಾಷೆಯ ಕುರಿತಾಗಿ ಎಚ್ಚರಿಕೆ ಮೂಡಿಸಲು ಸಾಧ್ಯವಾದರೆ ಅದು ನಮ್ಮನ್ನು ನಾವೇ ಎಚ್ಚರಿಸಿದಂತೆ ಎಂದ ಅವರು, ಪ್ರಾಧಿಕಾರ ಭಾಷಾ ಕೇಂದ್ರಿತವಾಗಿ ಕೆಲಸ ಮಾಡುತ್ತಿದೆ. ಸಣ್ಣ ಭಾಷೆಗಳ ಬಗ್ಗೆ ಅರಿವು ಮೂಡಿದುವ ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಣ್ಣ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಬೆಳೆಸುವುದು ಪ್ರಾಧಿಕಾರದ ಅಧ್ಯಕ್ಷರ ಸಂಕಲ್ಪ ಎಂದರು.
ಎನ್ನೆಂಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಧುರಾ ಎಂ.ಆರ್. ವಂದಿಸಿದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.