
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.26: ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವವು ಅತ್ಯಂತ ವೈಭವ ಮತ್ತು ಸಡಗರದಿಂದ ನೆರವೇರಿತು.
ಹೇಮಾವತಿ ನದಿಯ ದಡದಲ್ಲಿರುವ ಈ ಸುಂದರ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಉತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಹೇಮಗಿರಿ ಬೆಟ್ಟದ ಮೇಲಿನ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥಸಪ್ತಮಿಯ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ಮುಂಜಾನೆಯಿಂದಲೇ ಆರಂಭಗೊಂಡವು. ವೇದಘೋಷಗಳ ನಡುವೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು, ಸ್ವಾಮಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ನಿಗದಿತ ಶುಭ ಲಗ್ನದಲ್ಲಿ ವೇದಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಿನ ದೇವಾಲಯದಿಂದ ಬೆಟ್ಟದ ಪಾದಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದ ಅನಂತರ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಶಾಸಕ ಹೆಚ್.ಟಿ.ಮಂಜು, ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಹಶೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿದ ವೈದಿಕರು ಶಾಲು ಹೊದಿಸಿ ರಥೋತ್ಸವಕ್ಕೆ ಚಾಲನೆ ನೀಡುವಂತೆ ಕೋರಿದರು. ಕಲ್ಯಾಣ ವೆಂಟಕರಮಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಹೆಚ್.ಟಿ.ಮಂಜು ಮತ್ತಿತರ ಜನಪ್ರತಿನಿಧಿಗಳು ಭಕ್ತ ವೃಂದದ ಜೊತೆಗೂಡಿ ತೇರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಕಲ್ಯಾಣ ವೆಂಕಟರಮಣಸ್ವಾಮಿಗೆ ಜಯಘೋಷ ಮಾಡುತ್ತಾ ಬೆಟ್ಟದ ಸುತ್ತ ತೇರು ಎಳೆದು ಭಕ್ತರು ಪುನೀತರಾದರು. ರಥ ಸಾಗುವ ಹಾದಿಯಲ್ಲಿ ಭಕ್ತಾದಿಗಳು ಮತ್ತು ನವಜೋಡಿಗಳು ರಥದ ಮೇಲಿನ ಉತ್ಸವ ಮೂರ್ತಿಗೆ ಹಣ್ಣು-ಜವನ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಪೆÇಲೀಸ್ ನಿರೀಕ್ಷಕ ಆನಂದೇಗೌಡ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗಾಗಿ ದಾಸೋಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮತ್ತು ವಿವಿಧ ಸಂಘ-ಸಂಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದವು.
ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ರಥೋತ್ಸವದ ಅಂಗವಾಗಿ ನಡೆಯುವ ದನಗಳ ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಹೇಮಗಿರಿಯ ಜಾತ್ರೆ ಮಾಳದಲ್ಲಿ ಸಾವಿರಾರು ರಾಸುಗಳು ಆಗಮಿಸಿದ್ದವು. ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಜಾತ್ರಾ ಸಮಿತಿಯ ವತಿಯಿಂದ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ನಡೆಯಿತು.



























