ಸಚಿವ ಸ್ಥಾನದಿಂದ ರಾಜಣ್ಣ ವಜಾಗೆ ಖಂಡನೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.19:-
ವಾಲ್ಮೀಕಿ ನಾಯಕ ಸಮಾಜದ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.


ವಾಲ್ಮೀಕಿ ನಾಯಕ ಸಮಾಜದ ಪ್ರಭಾವಿ ಮುಖಂಡ, ಅಹಿಂದದ ಗಟ್ಟಿ ಧ್ವನಿಯಾಗಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಯಾವುದೇ ಕಾರಣವಿಲ್ಲದೆ, ಸಮಜಾಯಿಸಿ ನೋಟೀಸನ್ನೂ ನೀಡದೆ ಏಕಾಏಕಿ ಸ್ವಪಕ್ಷೀಯವಾಗಿ ವಜಾ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ಇದು ವಾಲ್ಮೀಕಿ ನಾಯಕ ಸಮಾಜಕ್ಕೆ ಅಪಮಾನವಾಗಿದೆ ಎಂದು ಕಿಡಿ ಕಾರಿದರು.


ಕೆ.ಎನ್.ರಾಜಣ್ಣ ಎಸ್‍ಸಿ, ಎಸ್‍ಟಿ ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿ ಬಡವರ ಪರ ಕಾಳಜಿಯಿರುವ ಅಜಾತ ಶತ್ರು. ಸಮ ಸಮಾಜದ ಕನಸುಗಾರ. ಸರ್ವರಿಗೂ ಆರ್ಥಿಕ ಸಮಾನತೆ ದೊರೆಯಬೇಕು, ರಾಜಕೀಯ ಅಧಿಕಾರ ಹಂಚಿಕೆಯಾಗಬೇಕೆಂದು ಆಸೆ ಇಟ್ಟುಕೊಂಡು ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಲು ಎಲ್ಲ ಸಿದ್ಧತೆ ನಡೆಸಿದ್ದರು. ಆದರೆ, ಸಹಕಾರಿ ಮೀಸಲಾತಿ ವಿರೋಧಿಗಳು ಷಡ್ಯಂತ್ರ ಮಾಡಿ ಹೈಕಮಾಂಡ್ ಮೂಲಕ ಅಧಿಕಾರದಿಂದ ವಜಾ ಮಾಡಿಸಿದ್ದಾರೆ. ಇದು ನಾಯಕ ಜನಾಂಗವನ್ನು ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಆರೋಪಿಸಿದರು.


ಈ ಹಿಂದೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಅವರನ್ನು ಹೊಣೆಗಾರನ್ನಾಗಿ ಮಾಡಿ, ಜೈಲಿಗೆ ಅಟ್ಟಿ ಉದ್ದೇಶಪೂರ್ವಕವಾಗಿ ನಮ್ಮ ಸಮಾಜದ ರಾಜಕಾರಣಿಗಳನ್ನು ತುಳಿಯುವ ಕೆಲಸ ಸ್ವಪಕ್ಷದಲ್ಲೇ ನಡೆಯುತ್ತಿದೆ. ಇದನ್ನು ಹೈಕಮಾಂಡ್ ಗಮನಿಸಬೇಕು. ತಕ್ಷಣ ನಾಯಕ ಸಮಾಜಕ್ಕೆ ಆಗುತ್ತಿರುವ ರಾಜಕೀಯ ದಬ್ಬಾಳಿಕೆ ಸರಿಪಡಿಸದಿದ್ದಲ್ಲಿ ಹಾಗೂ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ರಾಜ್ಯ ಉಪಾಧ್ಯಕ್ಷ ಶಿವಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಉದ್ದೂರು ಎಂ.ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.