
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲಪಟಾಯಿಸಿ ಅದನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಂಚಿ ಗೆದ್ದಿದ್ದಾರೆಂಬ ಆರೋಪ ಎದುರಿಸುತ್ತಿರುವ ಈ.ತುಕರಾಂ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಪರಾಭವಗೊಂಡಿರುವ ಅಭ್ಯರ್ಥಿ ಬಿ.ಶ್ರೀರಾಮುಲು ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರಂತೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಅರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾಯ್ತು. ಈ ಪ್ರಕರಣ ನಡೆದ ವರ್ಷದ ಬಳಿಕ ಬಳ್ಳಾರಿ ಜಿಲ್ಲೆಯ ನಾಲ್ವರು ಶಾಸಕ ಸಂಸದರ ಮನೆ ಮೇಲೆ ಇಡಿ ದಾಳಿ ನಡೆದಿದ್ದಾಯ್ತು.
ಇಷ್ಟಲ್ಲ ಆದ ಬಳಿಕ ಈಗ ಶ್ರೀರಾಮುಲು ಅವರು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹಂಚಿ ಲೋಕಸಭೆ ಚುನಾವಣೆಯನ್ನು ತುಕಾರಾಂ ಗೆದ್ದಿದ್ದಾರೆಂಬ
ದಾಖಲೆ ಸಮೇತವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೀಗಾಗಿ ಈ ಬಗ್ಗೆ ಕಾನೂನು ಹೋರಾಟ ಮಾಡುವ ಚಿಂತನೆಯಿಂದ ಈಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸೋ ಮೂಲಕ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರಂತೆ.
ಸಂಸದ ತುಕಾರಾಂ ಅವರು ಹಣ ಹೆಂಡ ಹಂಚುವ ಮೂಲಕ ಜನರ ದಾರಿ ತಪ್ಪಿಸಿ ಮತವನ್ನು ಪಡೆದಿದ್ದಾರೆ. ಇದು ಚುನಾವಣೆ ನಿಯಮ ಮತ್ತು ಕಾನೂನು ಪ್ರಕಾರ ಅಪರಾಧ ವಾಗಿದೆ. ಹೀಗಾಗಿ ತ ಅವರ ಸಂಸದ ಸ್ಥಾನವನ್ನು ರದ್ದು ಮಾಡುವಂತೆ ಹೋರಾಟ ನಡೆಸಲಿದ್ದಾರಂತೆ.