ಸಂಶೋಧನೆ-ಅಭಿವೃದ್ಧಿಗೆ ಪೂರಕವಾಗಿ ರೆಗ್ಯುಲೇಟರಿ ಸ್ಯಾಂಡ್‍ಬಾಕ್ಸ್ ಪರಿಸರ ಗುರಿ

ಬೆಂಗಳೂರು. ಜ.30:- ನಮ್ಮಲ್ಲಿ ಕರ್ನಾಟಕ ಇನ್ನೋವೇಶನ್ ಆಕ್ಟ್ ಜಾರಿಯಾಗಿದ್ದು, ಅದರ ಅಡಿಯಲ್ಲಿ ನಾವು ‘ರೆಗ್ಯುಲೇಟರಿ ಸ್ಯಾಂಡ್‍ಬಾಕ್ಸ್’ ಪರಿಸರವನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ವಿವಿಧ ತಂತ್ರಜ್ಞಾನಗಳಿಗೆ ಪೂರಕವಾಗಿರಲಿದ್ದು, ಕಡಿಮೆ ನಿಯಮಾವಳಿಗಳಿರುವ ಮುಕ್ತ ವಾತಾವರಣದಲ್ಲಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಹೆಚ್ಚಿನ ಅಭಿವೃದ್ಧಿಗೆ ಅವಕಾಶ ನೀಡವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್ (ಐಎಎಸ್) ಹೇಳಿದರು.


ಬೆಂಗಳೂರಿನ ಲೀಲಾ ಭಾರತೀಯ ಸಿಟಿಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಆಯೋಜಿಸಿರುವ ವಾರ್ಷಿಕ ಸಮಾವೇಶವಾದ ‘ಇಂಡಿಯಾ ಡಿಜಿಟಲ್ ಸಮಿಟ್’ (ಐಡಿಎಸ್) ನ 20ನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಎಐ ಅಳವಡಿಕೆಯಲ್ಲಿ ಕರ್ನಾಟಕದ ಪಾತ್ರದ ಬಗ್ಗೆ ಮಾತನಾಡಿದ ಅವರು, ಭಾರತದ ಎಐ ಸಾಮಥ್ರ್ಯದ ಮೂಲಸ್ತಂಭವಾಗಿ ಕರ್ನಾಟಕ ನಿಂತಿದೆ ಎಂದು ಹೇಳಿದರು. ರಾಜ್ಯದಲ್ಲಿರುವ ಎಐ ಪ್ರತಿಭೆಗಳ ಸಮ್ಮಿಲನ, ಸರ್ಕಾರ ಪ್ರಾಯೋಜಿತ ಉತ್ಕೃಷ್ಟತಾ ಕೇಂದ್ರಗಳು, ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಮತ್ತು ಸಾಟಿಯಿಲ್ಲದ ಸ್ಟಾರ್ಟ್‍ಅಪ್ ಪರಿಸರ ವ್ಯವಸ್ಥೆಯಿಂದಾಗಿ ಕರ್ನಾಟಕವು ಈ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.


ಈ ಕುರಿತು ವಿವರವಾಗಿ ಮಾತನಾಡಿದ ಡಾ.ಮಂಜುಳಾ ಎನ್ ಅವರು, “ಒಂದು ರಾಷ್ಟ್ರೀಯ ಎಐ ಆರ್ಕಿಟೆಕ್ಚರ್ ಅನ್ನು ನಿರ್ಮಿಸಲು ಅಗತ್ಯವಾದ ತಳಮಟ್ಟದ ಸಾಮಥ್ರ್ಯಗಳನ್ನು ಸೃಷ್ಟಿಸುವಲ್ಲಿ ಕರ್ನಾಟಕದ ಕಾರ್ಯವೈಖರಿ ಮತ್ತು ಹೂಡಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನಾವು ಸೆಂಟರ್ ಆಫ್ ಎಕ್ಸಲೆನ್ಸ್ ಗಳ ಜಾಲದ ವಿಸ್ತರಣೆ, ವೇಗವರ್ಧಕ ಕಾರ್ಯಕ್ರಮ ಮತ್ತು ಡೀಪ್ ಟೆಕ್ ಕೌಶಲ್ಯದ ಪೈಪ್‍ಲೈನ್ ಅನ್ನು ಹೊಂದಿದ್ದೇವೆ,” ಎಂದು ಅಭಿಪ್ರಾಯಪಟ್ಟರು.


ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ಚೇರ್ ಮನ್ ಹಾಗೂ ಬಿಲ್‍ಡೆಸ್ಕ್ ಸಹ-ಸಂಸ್ಥಾಪಕರೂ ಆಗಿರುವ ಶ್ರೀನಿವಾಸು ಎಂ.ಎನ್ ಅವರು, “ಇಂದು ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಬ್ಯಾಂಕಿಂಗ್, ಪಾವತಿಗಳು, ವಾಣಿಜ್ಯ, ಸಾರಿಗೆ, ಶಿಕ್ಷಣ ಅಥವಾ ಆರೋಗ್ಯ ಕ್ಷೇತ್ರವೇ ಇರಲಿ ಎಲ್ಲಾ ಕಡೆಗೆ ದೇಶದ ಬೆಳವಣಿಗೆಯನ್ನು ಮುನ್ನಡೆಸುತ್ತಿರುವ ಆರ್ಥಿಕತೆಯ ಭದ್ರ ಬುನಾದಿಯಾಗಿದೆ ಎಂದರು.ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷಡಾ. ಸುಭೋ ರೇ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.