
ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ-ಸುದ್ದಿಗೋಷ್ಠಿಯಲ್ಲಿ ಕೊಯಿಂಗಾಜೆ ಹೇಳಿಕೆ
ಸುಳ್ಯ:ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ ರಾಜಿನಾಮೆ ನೀಡಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ರಾಜಿನಾಮೆ ಘೋಷಣೆ ಮಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಹೆಸರು ಕೇಳಿ ಬಂದಿದ್ದ, ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ ಆದ ಸೋಮಶೇಖರ ಕೊಯಿಂಗಾಜೆ ಸಂಪಾಜೆ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಶೀತಲ ಸಮರ ಹಾಗು ಪಕ್ಷದಲ್ಲಿ ನಿರಂತರ ಉಂಟಾಗಿರುವ ಒಡಕಿನಿಂದ ಬೇಷತ್ತು ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಚುನಾವಣಾ ರಾಜಕೀಯದಿಂದಲೂ ಹಿಂದೆ ಸರಿಯುವುದಾಗಿ ಹೇಳಿದ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು. ನನ್ನ ರಾಜಿನಾಮೆಯನ್ನು ಒಕ್ಟೋಬರ್ ೩೦ ೨೦೨೫ ರಂದು ಸಲ್ಲಿಸಿದ್ದು ಇದೀಗ ಅದನ್ನು ಪ್ರಕಟಿಸುತ್ತಿದ್ದೇನೆ ಎಂದು ಹೇಳಿದರು.
ನಾನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಸೇರಿ ಯಾವುದೇ ಹುದ್ದೆಗಳ ಆಕಾಂಕ್ಷಿ ಅಲ್ಲ, ಬ್ಲಾಕ್ ಅಧ್ಯಕ್ಷತೆ ಒಪ್ಪಿಕೊಳ್ಳಬೇಕು ಎಂದು ಹಿರಿಯ ಮುಖಂಡರು ಒತ್ತಾಯಿಸಿದ್ದರು. ಆಗ ಒಪ್ಪಿಕೊಂಡಿದ್ದೆ, ಆದರೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಗೆ ನಾನು ಆಕಾಂಕ್ಷಿ ಅಲ್ಲ ಎಂದು ಹೇಳಿದ ಅವರು ಕೆಲವು ಮುಖಂಡರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಉಚ್ಚಾಟನೆಗೆ ಒಳಗಾದವರನ್ನು ಬೆಂಬಲಿಸುವ ಮೂಲಕ ಸಂಪಾಜೆ ಗ್ರಾಮದ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಪಕ್ಷದ ಆಂತರಿಕ ಶೀತಲ ಸಮರದಿಂದ ಪಕ್ಷದ ಚಟುವಟಿಕೆ ನಡೆಸುವುದು ಕಷ್ಟವಾಗಿದೆ. ಇದರಿಂದ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಅಗಿದೆ, ಮುಂದೆಯೂ ಪಕ್ಷಕ್ಕೆ ಹಿನ್ನಡೆ ಆದರೆ ಒಡಕು ಸೃಷ್ಠಿಸಿದವರೇ ಜವಾಬ್ದಾರರು.
ರಾಜ್ಯಮಟ್ಟದ ನಾಯಕರಾಗಿ ಬೆಳೆದವರು ತಮ್ಮ ಗ್ರಾಮದಲ್ಲಿಯೂ ಪಕ್ಷವನ್ನು ಕಟ್ಟಿ ಬೆಳೆಸಬೇಕು, ಅವರ ಗ್ರಾಮದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕೆಲವು ರಾಜ್ಯ ನಾಯಕರ ಗ್ರಾಮದಲ್ಲಿ ಕಾಂಗ್ರೆಸ್‌ಗೆ ಚುನಾವಣೆಗೆ ಸ್ಪರ್ಧೆ ಮಾಡಲು, ಬೂತ್‌ನಲ್ಲಿ ಕುಳಿತುಕೊಳ್ಳಲು ಜನ ಇಲ್ಲದ ಸ್ಥಿತಿ ಇದೆ. ಈ ಕುರಿತು ಪಕ್ಷ ಹಾಗೂ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೇರ ನಡೆ ನುಡಿಯ ಮುಖಂಡರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ, ಆದುದರಿಂದ ಅವರು ಅನಿವಾರ್ಯವಾಗಿ ತಟಸ್ಥರಾಗಿ ಉಳಿಯಬೇಕಾದ ಪರಿಸ್ಥಿತಿ ಬಂದಿದೆ. ದೊಂಬರಾಟ ಮಾಡುವವರಿಗೆ ಮಾತ್ರ ಅವಕಾಶ, ಸ್ಥಾನ ಮಾನ ಸಿಗುತಿದೆ. ನಾನು ಯಾಕೆ ರಾಜಿನಾಮೆ ನೀಡುತ್ತಿದ್ದೇನೆ ಎಂಬುದರ ಬಗ್ಗೆ ಸಭೆ ಕರೆದು ಗ್ರಾಮದ ಕಾರ್ಯಕರ್ತರಿಗೆ, ಜನರಿಗೆ ವಿವರಿಸುತ್ತೇನೆ. ತಾನು ಪಲಾಯನ ಮಾಡುತ್ತಿಲ್ಲ, ಬದಲಾಗಿ ಸ್ವಯಂ ನಿವೃತ್ತನಾಗುತ್ತಿದ್ದೇನೆ, ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಅವರು ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಮುಂದುವರಿಯುತ್ತೇನೆ. ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ, ಆದುದರಿಂದ ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಸೋಮಶೇಖರ ಕೊಯಿಂಗಾಜೆ ಹೇಳಿದರು.




























