Home ಜಿಲ್ಲೆ ಮಂಗಳೂರು ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ – ಎಸ್ ಐ ಸಂತೋಷ್

ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ – ಎಸ್ ಐ ಸಂತೋಷ್

ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಚಾಲಕರಿಗೆ ಸುಳ್ಯ ಠಾಣೆಯಲ್ಲಿ ಸಭೆ
ಸುಳ್ಯ:ಸುಳ್ಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗುವ ಶಾಲಾ ವಾಹನಗಳು ಮತ್ತು ಆಟೋರಿಕ್ಷಾ ಚಾಲಕರುಗಳಿಗೆ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಂಚಾರಿ ನಿಯಮ ಪಾಲಿಸುವ ಬಗ್ಗೆ ಮಾಹಿತಿ ನೀಡುವ ಸಭೆ ಶನಿವಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆಯಿತು.
ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಶಾಲಾ ವಾಹನಗಳ ಚಾಲಕರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಎಸ್.ಐ ಸಂತೋಷ್ ‘ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಿಗೆ ಸಾಗಿಸುವ ವಾಹನಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು. ವಿದ್ಯಾರ್ಥಿಗಳನ್ನು ಅತ್ಯಂತ ಸುರಕ್ಷಿತವಾಗಿ ಕರೆದೊಯ್ಯುವುದು ಅಗತ್ಯ. ಅಪಘಾತ ಸೇರಿದಂತೆ ಯಾವುದೇ ತೊಂದರೆಗಳು ಎದುರಾಗದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ವಿದ್ಯಾರ್ಥಿಗಳನ್ನು ಸಾಗಿಸುವ ಶಾಲಾ ವಾಹನಗಳಿಗೆ ವಾಹನ ಚಾಲನೆ ಪರವಾನಗಿ ಹೊಂದಿರುವ ಅನುಭವಿ ಚಾಲಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಶಾಲೆಗಳಲ್ಲೂ ಶಾಲಾ ವಾಹನ ಸುರಕ್ಷತಾ ಸದಸ್ಯರ ಸಮಿತಿ ರಚಿಸಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಿಯಮಬಾಹಿರವಾಗಿ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಆದ್ದರಿಂದ ಇದಕ್ಕೆ ಆಸ್ಪದ ಕೊಡದೆ ಮಕ್ಕಳ ಸುರಕ್ಷತೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ವಾಹನಗಳಲ್ಲಿ ತುಂಬಿಸಿಕೊಂಡು ಹೋಗುವುದು ಕಂಡು ಬಂದಲ್ಲಿ ಅಂತಹ ವಾಹನಗಳ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಶಾಲಾ ವಾಹನಗಳ ಚಾಲಕರು ಕಡ್ಡಾಯವಾಗಿ ಓರ್ವ ಸಹಾಯಕನನ್ನು ಸದಾ ಬಸ್ಸಿನಲ್ಲಿ ಇರಿಸಿಕೊಳ್ಳಬೇಕು. ಮಕ್ಕಳನ್ನು ರಸ್ತೆ ಬದಿಯಲ್ಲಿ ಇಳಿಸುವ ಸಂದರ್ಭದಲ್ಲಿ ಅವರು ಮಕ್ಕಳ ಮೇಲೆ ಪೂರ್ಣ ನಿಗಾ ಇಟ್ಟುಕೊಳ್ಳಬೇಕು ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಪೂರ್ಣವಾದ ಜವಾಬ್ದಾರಿಯಿಂದ ಇರಬೇಕೆಂದು ಹೇಳಿದರು.
ಸಭೆಯಲ್ಲಿ ಆಟೋ ಚಾಲಕರುಗಳು, ಶಾಲಾ ಬಸ್ ಚಾಲಕರುಗಳು, ಸಂಸ್ಥೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು.