ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ಹೊನ್ನೇಗೌಡ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.22:
ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ನಾವು ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಸುರಕ್ಷಿತ ಪ್ರಯಾಣ ಎಲ್ಲಾ ವಾಹನ ಚಾಲಕರ ಗುರಿಯಾಗಿರಬೇಕೆಂದು ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಾಯಕ ಸಾರಿಗೆ ಅಧಿಕಾರಿ ಹೊನ್ನೇಗೌಡ ಕರೆ ನೀಡಿದರು.


ಅವರು ಪಟ್ಟಣದ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಇಲಾಖೆಯ ವತಿಯಿಂದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಚಾಲನಾ ನಿಯಮಗಳ ಬಗ್ಗೆ ಅರಿವು ಮೂಡಿಸಿದ ಹೊನ್ನೇಗೌಡ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಆಸ್ತಿ. ನಿಮ್ಮ ಶಿಕ್ಷಣದ ಫಲ ಸಮುದಾಯಕ್ಕೆ ದೊರಕಬೇಕಾದರೆ ನಿಮ್ಮೆಲ್ಲರ ಜೀವಗಳು ಸುರಕ್ಷಿತವಾಗಿರಬೇಕು. ಪ್ರತಿಯೊಬ್ಬ ವಾಹನ ಚಾಲಕರೂ ತಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯ ಕಡೆಗೂ ಎಚ್ಚರ ವಹಿಸಬೇಕು. ಹುಟ್ಟಿದ ಪ್ರತಿಯೊಂದು ಜೀವಿಯೂ ಅಮೂಲ್ಯ. ಪ್ರತಿಯೊಬ್ಬರಿಗೂ ಒಂದೊಂದು ಕುಟುಂಬವಿದೆ ಎನ್ನುವ ಅರಿವಿರಬೇಕೆಂದರು.


ಸಂಚಾರ ನಿಯಮಗಳ ಪಾಲನೆಯಿಂದ ಎಲ್ಲರೂ ಸುರಕ್ಷಿತವಾಗಿ ನಮ್ಮ ನಮ್ಮ ಮನೆಗಳನ್ನು ತಲುಪಬಹುದು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಬೇಡಿ. ಬೈಕ್ ಚಲಾಯಿಸುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ತ್ರಿಬ್ಬಲ್ ರೈಡಿಂಗ್ ಮಾಡಲೇಬೇಡಿ. ನೀವು ನಿಮ್ಮ ವಾಹನವೇರುವ ಮುನ್ನ ಅದು ಸುಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ವಾಹನಗಳಿಗೆ ಕಡ್ಡಾಯ ವಿಮೆ ಮಾಡಿಸಿ. ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಬಳಸಿ. ವಾಹನ ಚಾಲನೆ ಮೋಜು ಅಥವಾ ಮನರಂಜನೆಯಲ್ಲ ಎನ್ನುವುದು ಸದಾ ವಿದ್ಯಾರ್ಥಿಗಳ ಮನಸ್ಸಿನ ಬೇಕೆಂದು ಹೊನ್ನೇಗೌಡ ಕಿವಿ ಮಾತು ಹೇಳಿದರು.


ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ.ಸತೀಶ್, ಮೋಟಾರು ವಾಹನ ನಿರೀಕ್ಷಕಿ ಶಾಬಾಜ್ ಬಾನು, ಆರಕ್ಷಕ ಉಪ ನಿರೀಕ್ಷಕ ಚಂದ್ರಶೇಖರ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆ ಹೊರತಂದಿರುವ ಸಂಚಾರ ಸುರಕ್ಷತಾ ಭಿತ್ತಿಪತ್ರಗಳನ್ನು ಅತಿಥಿಗಳು ಪ್ರದರ್ಶಿಸಿ ಸಂಚಾರ ನಿಯಮಗಳ ಪಾಲನೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿದರು.