
ಸುಳ್ಯ ತಾಲೂಕಿಗೆ ೬೦ರ ಸಂಭ್ರಮ – ಶಾಸಕರ ನೇತೃತ್ವದಲ್ಲಿ ಸಭೆ
ಸುಳ್ಯ:ಸುಳ್ಯ ತಾಲೂಕು ರಚನೆಯಾಗಿ ೬೦ ವರ್ಷ ಆಗಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಷಷ್ಟ್ಯಬ್ಧ ಸಂಭ್ರಮ ನಡೆಸುವ ಬಗ್ಗೆ ಸಮಾಲೋಚನಾ ಸಭೆ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ತಮ್ಮ ಸಲಹೆ – ಸೂಚನೆಗಳನ್ನು ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕು ಷಷ್ಠ್ಯಬ್ಧ ಆಚರಣೆ ಕಾರ್ಯಕ್ರಮ ಸುಳ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿ. ಈ ನಿಟ್ಟಿನಲ್ಲಿ ನಾವು ಕಾರ್ಯಕ್ರಮಕ್ಕೆ ಕಂದಾಯ ಮತ್ತು ಲೋಕೋಪಯೋಗಿ ಸಚಿವರನ್ನೂ ಆಹ್ವಾನಿಸಿ ಸಮಾರಂಭ ಮಾಡೋಣ. ತಾಲೂಕಿನ ಸರ್ವರೂ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಸುಳ್ಯ ತಾಲೂಕಿನ ಆರವತ್ತರ ಸಂಭ್ರಮ ಸುಳ್ಯದ ಪ್ರಮುಖ ಬೇಡಿಕೆಗಳಾದ ಪ್ಲೋಟಿಂಗ್ ಸಮಸ್ಯೆ ನಿವಾರಣೆ, ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಾಣ, ಕೈಗಾರಿಕಾ ಪಾರ್ಕ್ ಆರಂಭ, ನಗರದ ರಸ್ತೆ ಅಗಲೀಕರಣ ಅಥವಾ ಬೈಪಾಸ್ ರಸ್ತೆ ನಿರ್ಮಾಣ, ಸುಳ್ಯದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿ, ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿ, ಸುಳ್ಯಕ್ಕೆ ರೈಲು ಸೇವೆ, ಸುಳ್ಯದ ಘನತ್ಯಾಜ್ಯ ಸಮಸ್ಯೆ ನಿವಾರಣೆ ಆಗಲಿ, ಅಂಬೇಡ್ಕರ್ ಭವನ ಪೂರ್ಣಗೊಳ್ಳಲಿ ಸೇರಿದಂತೆ ವಿವಿಧ ಬೇಡಿಕೆಗಳು ಅನುಷ್ಠಾನ ಆಗಲಿ ಎಂದು ಪ್ರಮುಖರು ಒತ್ತಾಯಿಸಿದರು. ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಉಪ ತಹಸೀಲ್ದಾರ್ ಚಂದ್ರಶೇಖರ, ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥ, ಸಂಚಾಲಕರಾದ ರಾಧಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಸಂತೋಷ್ ಕುತ್ತಮೊಟ್ಟೆ, ಜಾಕೆ ಮಾಧವ ಗೌಡ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿ.ಎಸ್. ಗಂಗಾಧರ ವಂದಿಸಿದರು.


























