
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಎ.09: ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ತಾಲೂಕಿನ ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ಸಿಡಿ ಮತ್ತು ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ಜರುಗಿದ್ದು, ಸುತ್ತಳ್ಳಿಯ 18 ಗ್ರಾಮ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ಇತರೆ ಭಾಗಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು.
ಗ್ರಾಮದ ಕೆ.ಆರ್.ಪೇಟೆ ರಸ್ತೆಯ ಕೆರೆಯ ಬಳಿ ಕಲ್ಲಿನ ಬಂಡಿ ರಥಕ್ಕೆ ಅಡಿಕೆ ಮರದಿಂದ ಸಿಡಿ ಕಂಬಗಳನ್ನು ನಿರ್ಮಿಸಿ ವಿವಿಧ ಹೂಗಳಿಂದ ಅಲಂಕಾರ ಮಾಡಿದ ಬಳಿಕ. ಅಡಿಕೆ ಮರದ ತುಂಬೆಲ್ಲ ಬಾಳೆಗೊನೆಗಳಿಂದ ಕಟ್ಟಿ ಸಿಂಗಾರಗೊಳಿಸಲಾಯಿತು.
ಮಂಗಳವಾರ ರಾತ್ರಿ 10.30 ಗಂಟೆಗೆ ವೇಳೆಯಲ್ಲಿ ಸಿಡಿ ಉತ್ಸವಕ್ಕೆ ಗ್ರಾಮದ ನಾಡಗೌಡರು ಸೇರಿ ಯಜಮಾನರು, ಮುಖಂಡರುಗಳ ಸಮುಖದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ನೆರದಿದ್ದ ಯುವಕರ ಪಡೆ ಹಾಗೂ ಭಕ್ತ ಸಮೂಹ ಗ್ರಾಮ ದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಿಗೆ ಜೈಕಾರ ಕೂಗುತ್ಗಾ ಸಿಡಿಯನ್ನು ಸಂತೆ ಬೀದಿಯ ಮೂಲಕ ಎಳೆದರು.ತಂಬಿಟ್ಟು ಆರತಿ ಬೆಳಗಿದ ಮುತ್ತೈದೆಯರು ಹಾಗೂ ತವರಿಗೆ ಬಂದ ಹೆಣ್ಣುಮಕ್ಕಳು, ನವ ದಂಪತಿಗಳು ಸಿಡಿ ರಥಕ್ಕೆ ಹಣ್ಣು, ಜವನ ಎಸೆದು ತಮ್ಮ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು.
ಇಡೀ ಗ್ರಾಮವೇ ತಳಿರು ತೋರಣಗಳಿಂದ ಕಂಗೊಳಿ ಸುತ್ತಿತ್ತು. ಎಲ್ಲೆಲ್ಲೂ ತೆಂಗಿನಗರಿ, ಮಾವಿನ ಸೊಪ್ಪಿನ ತೋರಣ, ಬಾಳೆ ಕಂದು, ಅಡಕೆ ಹೊಂಬಾಳೆ ರಾರಾಜಿಸುತ್ತಿದ್ದವು.ಸಿಂಗಾರಗೊಂಡ ಗ್ರಾಮ: ದೀಪಾಂಲಕಾರದಿಂದ ಇಡೀ ಗ್ರಾಮವೇ ಜಗಜಗಿಸುತ್ತಿತ್ತು.
ಈ ಎಲ್ಲದರ ನಡುವೆ ನೆರೆದಿದ್ದ ಭಕ್ತರು ತೇರಿಗೆ ಹೂವು, ಹಣ್ಣು ಎಸೆದು ಜೈಕಾರ ಕೂಗುತ್ತಾ ಸಂಭ್ರಮಿಸಿದರು. ಕೊಂಬು, ಕಹಳೆ, ಮಂಗಳವಾದ್ಯ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಸಂತೆ ಬೀದಿಯ ಮಾರ್ಗವಾಗಿ ಗಾಂಧಿ ವೃತ್ತದ ಮೂಲಕ ಹಾಸನ- ಮೈಸೂರು ರಸ್ತೆಯಿಂದ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಸ್ಥಾನದ ಬಳಿಗೆ ಸಿಡಿ ರಥವನ್ನು ಎಳೆದು ತಂದು ನಿಲ್ಲಿಸಿದ ನಂತರ ಗ್ರಾಮದ ಮುತ್ತೈದೆಯರು ಹಾಗೂ ಯುವತಿಯರು, ಬಾಲಕಿಯರು ತಂಬಿಟ್ಟು ಆರತಿ ಬೆಳಗಿದರು. ಬಳಿಕ ಸಿಡಿ ರಥವನ್ನು ಎಳೆದು ಮೂರಿ ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು.
ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಫಸಲು ಬರಲಿ ಎಂದು ಪ್ರಾರ್ಥಿಸಿ ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಿಗೆ ಟ್ರಸ್ಟ್ ನ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ಹಾಗೂ ಗ್ರಾಮದ ಹಿರಿಯ ಯಜಮಾನರುಗಳು ಪೂಜೆ ಸಲ್ಲಿಸಿದರು.
ಉದ್ಯೋಗ, ಸಂತಾನ ಕರುಣಿಸಲು ಬಾಯಿ ಬೀಗದ ಮೂಲಕ ಹರಕೆ ತೀರಿಕೆ:
ಸಾಮಾನ್ಯವಾಗಿ ಹಿಂದಿನಿಂದಲೂ ಪ್ರತಿ ದೇವರಗಳ ಬಳಿ ಭಕ್ತರು ವಿವಿಧ ರೀತಿಯ ಹರಕೆ ಹೊರತ್ತಾರೆ.ಹೆಚ್ಚಾಗಿ ಮದುವೆಯಾಗದ ಯುವಕ ಯುವತಿಯರು ಮದುವೆಯಾಗಲೆಂದು ದೇವರಲ್ಲಿ ಹರಕೆ ಹೊರುವುದು ಸರ್ವೇ ಸಾಮಾನ್ಯ. ಆದರೇ ಈ ದೇವಿಯಲ್ಲಿ ಮಾತ್ರ ನಿರುದ್ಯೊಗಿಗಳು ಇಲ್ಲಿಗೆ ಬಂದು ಹರಕೆ ಹೊತ್ತರೇ ವರ್ಷದಲ್ಲಿ ಉದ್ಯೋಗ ದೊರಕುತ್ತದೆ ಎಂಬ ನಂಬಿಕೆ ಅಲ್ಲದೇ ಮಕ್ಕಳಾಗದವರು ಇಲ್ಲಿಗೆ ಬಂದು ಬಾಯಿಬೀಗ ಹಾಕಿಕೊಂಡರೇ ಸಂತಾನ ಪ್ರಾಪ್ತಿ ಲಭಿಸುವುದು ಎಂಬ ಅಚಲವಾದ ನಂಬಿಕೆ ಭಕ್ತರದ್ದು. ಹಾಗಾಗಿ ಇಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರೇ ಹರಕೆ ಹೊತ್ತು ಬಾಯಿಬೀಗ ಹಾಕಿಕೊಂಡು ಹರಕೆ ತೀರಿಸುತ್ತಾರೆ.
ಬುಧವಾರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಾಗಿಯಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಇಷ್ಟಾರ್ಥ ದೇವಿಯ ದರ್ಶನ ಪಡೆದು ಕೊಂಡರು.
ಸಾಲಿಗ್ರಾಮ ಪೆÇಲೀಸ್ ಠಾಣೆ ವತಿಯಿಂದ ಪೆÇಲೀಸ್ ಇನ್ಸ್ ಪೆಕ್ಟರ್ ಶಶಿಕುಮಾರ್ ಒಂದು ಪೆÇಲೀಸ್ ತುಕಡಿಯನ್ನು ಹಾಗೂ ಮಹಿಳಾ ಪೆÇಲೀಸ್ ಪೇದೆ ಸೇರಿದಂತೆ ಐವತ್ತು ಮಂದಿ ಪೆÇಲೀಸರನ್ನು ಜಾತ್ರಾ ಮಹೋತ್ಸವಕ್ಕೆ ನಿಯೋಜಿಸುವ ಮೂಲಕ ಸೂಕ್ತ ಬಂದು ಬಸ್ತ್ ಏರ್ಪಡಿಸಿದ್ದರು.
ಪಾನಕ, ಮಜ್ಜಿಗೆ ವಿತರಣೆ: ಜಾತ್ರಾ ಮಹೋತ್ಸವ ವೇಳೆಯಲ್ಲಿ ಅಲ್ಲಲ್ಲಿ ಪಾನಕ, ಮಜ್ಜಿಗೆಯನ್ನು ಜಾತ್ರೆಗೆ ಬಂದಂತಹವರಿಗೆ ವಿತರಿಸಲಾಯಿತು. ಇನ್ನೂ ಗ್ರಾಮದ ಹೂವಿನ ವ್ಯಾಪಾರಸ್ಥರಿಂದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕರಿಯಮ್ಮ ದೊಡ್ಡಮ್ಮ ಸಿಡಿ.ಮತ್ತು ಜಾತ್ರಾ ಮಹೋತ್ಸವಕ್ಕೆ ಹಿನ್ನೆಲೆಯಲ್ಲಿ ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್ ಕುಮಾರ್ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದೇ ವೇಳೆ ಟ್ರಸ್ಟ್ ನ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ಹಾರಹಾಕಿ ಶಾಲು ಹೊದಿಸಿ ಅಭಿನಂದಿಸಿದರು.























