
ಪುತ್ತೂರು: ಯು.ಆರ್. ಪ್ರಾಪರ್ಟೀಸ್ ಸಂಸ್ಥೆಯ ವತಿಯಿಂದ ನಗರದ ಬೆದ್ರಾಳದಲ್ಲಿ ಸುಮಾರು ೧೦೦ ನಿವೇಶನಗಳನ್ನು ವಿನ್ಯಾಸಗೊಳಿಸಿ ನಿರ್ಮಾಣಗೊಂಡಿರುವ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಸೋಮವಾರ ಸಂಜೆ ನಡೆದ ಅದ್ದೂರಿ ಹೊರೆಕಾಣಿಕೆ ಮೆರವಣಿಗೆ ಬಳಿಕ ರಾತ್ರಿ ಥೀಂ ಪಾರ್ಕ್ ಪಕ್ಕದ ದೈವಗಳ ಸಾನಿಧ್ಯದಲ್ಲಿ ಉಗ್ರಾಣ ಮುಹೂರ್ತ ನಡೆಯಿತು. ಯು.ಆರ್. ಪ್ರಾಪರ್ಟೀಸ್ ಮತ್ತು ನಾಗರಕ್ತೇಶ್ವರಿ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಗಳವಾರ ಬೆಳಗ್ಗೆ ಕಲಶ ಪ್ರದಾನ, ರಕ್ತೇಶ್ವರಿ, ವರ್ಣರ ಪಂಜುರ್ಲಿ ಮತ್ತು ಸಪರಿವಾರ ದೈವಗಳಿಗೆ ಕಲಶಾಭಿಷೇಕ ನಡೆಯಿತು. ಬಳಿಕ ನಾಗದೇವರಿಗೆ ತಂಬಿಲ, ದೈವಗಳ ತಂಬಿಲ ಸೇವೆ ನಡೆಯಿತು.
ಇದೇ ವೇಳೆ ಇಲ್ಲಿನ ನವೀಕೃತ ಶ್ರೀದೇವಿ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಯು.ಆರ್. ಪ್ರಾಪರ್ಟೀಸ್ ಸಂಸ್ಥೆಯ ಸಹಾಯಕ ಆಡಳಿತ ನಿರ್ದೇಶಕಿ ರಕ್ಷಾ ಎಸ್. ಆರ್. ದೀಪಪ್ರಜ್ವಲನೆ ಮಾಡಿದರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಥೀಂ ಪಾರ್ಕ್ ಲೋಕಾರ್ಪಣೆ ಸಮಾರಂಭ ಮತ್ತು ರಾತ್ರಿ ದೈವಗಳ ನೇಮೋತ್ಸವ ಜರುಗಿತು.
ಯು.ಆರ್. ಪ್ರಾಪರ್ಟೀಸ್ ಆಡಳಿತ ನಿರ್ದೇಶಕ, ನಾಗರಕ್ತೇಶ್ವರಿ ಪ್ರತಿಷ್ಠಾನದ ಸಂಚಾಲಕ ಉಜ್ವಲ್ ಪ್ರಭು, ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮ್ ಮೋಹನ್, ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ರೈ ನಳೀಲು, ನಿತಿನ್ ಮಂಗಳ, ಬಾಲಕೃಷ್ಣ ಗೌಡ, ಸಂಜೀವ ಗೌಡ ಮೊದಲಾದವರು ಉಪಸ್ಥಿತರಿದ್ದರು.


























