
ಪುತ್ತೂರು; ವಿಜೃಂಭಣೆಯ ಶ್ರೀನಿವಾಸ ಕಲ್ಯಾಣೋತ್ಸವದ ಸೌಂದರ್ಯಕ್ಕೆ ಕಪ್ಪುಚುಕ್ಕಿ ಎಂಬಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೊಬ್ಬರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಹೊರದೂಡಿದ ಘಟನೆ ಭಾನುವಾರ ರಾತ್ರಿ ನಡೆಯಿತು. ಇದರಿಂದ ನೊಂದ ಅವರು ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಳದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಕಣ್ಣೀರಿಟ್ಟ ಘಟನೆಯೂ ನಡೆಯಿತು.
ಪುತ್ತೂರು ದೇವಳದ ದೇವರಮಾರುಗದ್ದೆಯಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಮಂತ್ರಿತರಾಗಿ ಸಕುಟುಂಬಿತರಾಗಿ ಆಗಮಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರದಂತೆ ತಡೆದು ಹೊರ ದಬ್ಬಿದರು. ಈ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವದ ಸ್ಥಾಪಕಾಧ್ಯಕ್ಷ ಮಾರ್ತ ಅವರನ್ನು ಅಪಮಾನಿಸುವ ಹೈಡ್ರಾಮ ಪುತ್ತೂರಿನಲ್ಲಿ ನಡೆದುಹೋಯಿತು.
ಪುತ್ತೂರು ದೇವಳದಲ್ಲಿ ಈ ಕುರಿತು ಪ್ರಾರ್ಥನೆ ಸಲ್ಲಿಸಿದ ಪ್ರಸನ್ನ ಕುಮಾರ್ ಮಾರ್ತ ಅವರು ಮಾದ್ಯಮಗಳಿಗೂ ಕಣ್ಣೀರಿನ ನಡುವೆಯೇ ಹೇಳಿಕೆ ನೀಡಿದರು. ಪುತ್ತಿಲ ಪರಿವಾರದಲ್ಲಿದ್ದಾಗಲೂ ಸಮಸ್ತ ಹಿಂದೂಗಳ ಪರವಾಗಿಯೇ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲೂ ಪ್ರಸ್ತುತ ಅದೇ ಕಾರ್ಯವನ್ನು ಮಾಡುತ್ತಿದ್ದೇನೆ. ನನ್ನನ್ನು ಅವಮಾನಿಸಿದವನಿಗೆ ಶಿಕ್ಷೆ ಕೊಡಬೇಡ. ಬದಲಾಗಿ ಬುದ್ಧಿ ಕೊಡು. ಆತನಿಗೆ ಕುಟುಂಬ ಇದೆ. ಯಾರದೋ ಪೇರಣೆಯಿಂದ ಈ ಕೆಲಸ ಮಾಡಿದ್ದಾನೆ. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಬರುವಂತೆ ಪುತ್ತಿಲ ಪರಿವಾರದ ಪ್ರಮುಖರು ನನ್ನ ಮನೆಗೆ ಬಂದು ಆಹ್ವಾನಿಸಿದ್ದರು. ಅದಕ್ಕಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೆ. ನನ್ನನ್ನು ಹಾಗೂ ನನ್ನ ಕುಟುಂಬವನ್ನು ಗೇಟಿನಲ್ಲಿಯೇ ತಡೆಯಲಾಯಿತು. ಪುತ್ತಿಲ ಪರಿವಾರದ ಕಾರ್ಯಕರ್ತರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಪುತ್ತಿಲ ಪರಿವಾರದವರು ನನಗೆ ಮಾಡಿದ ಅಪಮಾನ ದೇವರಿಗೆ ಗೊತ್ತಾಗಿದೆ ಎಂದು ತಿಳಿಸಿದರು.
ರಾಜೀನಾಮೆಗೆ ಒತ್ತಡ
ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನದ ಹಿನ್ನೆಲೆಯಲ್ಲಿ ಈ ರೀತಿ ಅಪಮಾನ ಮಾಡಲಾಗಿದೆ. ಬಿಜೆಪಿ ಪಕ್ಷದ ಜವಾಬ್ದಾರಿ ಹೊತ್ತವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ನನಗೆ ಮಾತ್ರ ಈ ಅಪಮಾನ ಮಾಡಿದ್ದಾರೆ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷತೆಗೆ ರಾಜೀನಾಮೆ ನೀಡುವಂತೆ ನನಗೆ ಒತ್ತಡ ಹಾಕುವ ಕೆಲಸ ಪುತ್ತಿಲ ಪರಿವಾರದ ಒಬ್ಬರಿಂದ ನಡೆದಿದೆ. ಆತನ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ. ಈ ಘಟನೆ ಆದ ತಕ್ಷಣ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರೂ ಕರೆ ಮಾಡಿದ್ದಾರೆ ಎಂದು ಅವರು ಮಾದ್ಯಮಕ್ಕೆ ತಿಳಿಸಿದರು.
ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕೂಡಾ ಪ್ರಸನ್ನ ಕುಮಾರ್ ಮಾರ್ತ ಅವರ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಇದರೊಂದಿಗೆ ಮತ್ತೆ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಪುತ್ತಿಲ ಪರಿವಾರದ ನಡುವೆ ಜಟಾಪಟಿ ಆರಂಭದ ಲಕ್ಷಣಗಳು ಕಂಡುಬರುತ್ತಿದೆ.




























