Home ಜಿಲ್ಲೆ ಮಂಗಳೂರು ಶೇಕಮಲೆಯಲ್ಲಿ ‘ಮಾನವೀಯತೆಯ ಬಕ್ರೀದ್ ವೈದ್ಯರ ಚಿಕಿತ್ಸೆಗೆ ನೆರವಿನ ಹಸ್ತ

ಶೇಕಮಲೆಯಲ್ಲಿ ‘ಮಾನವೀಯತೆಯ ಬಕ್ರೀದ್ ವೈದ್ಯರ ಚಿಕಿತ್ಸೆಗೆ ನೆರವಿನ ಹಸ್ತ

oplus_2

ಪುತ್ತೂರು: ಅನಾರೋಗ್ಯ ಪೀಡಿತ ವೈದ್ಯರೊಬ್ಬರ ಚಿಕಿತ್ಸೆಗೆ ತಮ್ಮ ಬಕ್ರೀದ್ ಸಂಭ್ರಮವನ್ನು ಬದಿಗಿಟ್ಟು ಹಣ ಸಂಗ್ರಹಿಸಿ ಸಹಾಯಹಸ್ತ ನೀಡುವ ಮೂಲಕ ಶೇಕಮಲೆ ಜಮಾತ್ ವ್ಯಾಪ್ತಿಯ ಮುಸ್ಲಿಂ ಧರ್ಮೀಯರು ಮಾನವೀಯತೆಯನ್ನು ಮೆರೆದಿದ್ದಾರೆ.
ಒಳಮೊಗ್ರು ಗ್ರಾಮದ ಕುಂಬ್ರ ಅಮೃತ ಕ್ಲಿನಿಕ್ ವೈದ್ಯ ಡಾ.ವಿಘ್ನೇಶ್ವರ ಭಟ್ ಅವರು ಕೆಲ ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರು ಸಾಕಷ್ಟು ವೆಚ್ಚ ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಚಿಕಿತ್ಸೆಗೂ ಹಣ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂಕಷ್ಟದ ವೇಳೆ ಶೇಕಮಲೆ ಜಮಾತ್ ನ ಮುಸ್ಲಿಂ ಧರ್ಮೀಯರು ತಮ್ಮ ಬಕ್ರೀದ್ ಹಬ್ಬದ ಸಂಭ್ರಮವನ್ನು ವೈದ್ಯರ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಬಳಸಿಕೊಂಡು ಸಂಗ್ರಹವಾದ ರೂ.೫೮,೦೧೩ ವೈದ್ಯರಿಗೆ ನೀಡಿದರು. ಕೇವಲ ಹಣ ಸಂಗ್ರಹ ಮಾತ್ರವಲ್ಲ ವೈದ್ಯರ ರೋಗ ಶಮನಕ್ಕಾಗಿ ಮಸೀದಿಯಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ನಾವೆಲ್ಲಾ ಒಂದೇ ಎಂಬ ಆಶಯಕ್ಕೆ ಅರ್ಥ ನೀಡಿದರು.
ಕುಂಬ್ರದ ಅಮೃತ ಕ್ಲಿನಿಕ್ ಕಳೆದ ಹಲವು ವರ್ಷಗಳಿಂದ ಈ ಭಾಗದ ಜನರ ಆರೋಗ್ಯ ಸುಧಾರಣೆಯ ತಾಣವಾಗಿತ್ತು. ಇಲ್ಲಿನ ವೈದ್ಯರಾದ ಡಾ.ವಿಘ್ನೇಶ್ವರ ಭಟ್ ಅವರು ವೈದ್ಯ ವೃತ್ತಿಯನ್ನೇ ನಂಬಿಕೊಂಡು ಬದುಕಿದವರು. ಆದರೆ ಮಾರಕರೋಗ ಅವರ ಬದುಕನ್ನೇ ಬುಡಮೇಲು ಮಾಡಿದೆ. ಕನಿಷ್ಟ ಚಿಕಿತ್ಸೆಗೂ ಹಣ ಇಲ್ಲದೆ ತಾಪತ್ರಯ ಪಡುತ್ತಿದ್ದ ಅವರ ಸಂಕಷ್ಟಕ್ಕೆ ಮುಸ್ಲಿಂ ಭಾಂದವರು ಕೈ ಜೋಡಿಸಿದ್ದಾರೆ. ಬಕ್ರೀದ್ ಹಬ್ಬಕ್ಕಿಂತಲೂ ನಮ್ಮೂರಿನ ವೈದ್ಯರ ಕಷ್ಟಕ್ಕೆ ಸ್ಪಂಧಿಸುವ ಹಿನ್ನಲೆಯಲ್ಲಿ ಹಬ್ಬದಂದು ಹಣ ಸಂಗ್ರಹಣೆ ಮತ್ತು ವೈದ್ಯರ ಪರವಾಗಿ ಪ್ರಾರ್ಥಿಸುವ ಕೆಲಸಕ್ಕೆ ಒತ್ತು ನೀಡಿದರು.
ನಮ್ಮ ಊರಿನ ವೈದ್ಯ ಡಾ.ವಿಘ್ನೇಶ್ವರ ಭಟ್ ಅವರಿಗಾಗಿ ಶುಕ್ರವಾರ ಮತ್ತು ಬಕ್ರೀದ್ ದಿನ ವಿಶೇಷ ಪ್ರಾರ್ಥನೆ ಮಾಡಿದ್ದೇವೆ. ಧರ್ಮ, ಜಾತಿ ಮತ ಯಾವುದೇ ಆಗಿರಲಿ ಅವರೊಬ್ಬರ ಮನುಷ್ಯರೆಂದೇ ತಿಳಿದು ಈಕಾರ್ಯ ಮಾಡಿದ್ದೇವೆ. ಮನುಷ್ಯ ಸಂಕಷ್ಟದಲ್ಲಿರುವಾಗ ಸಹಾಯ ಮಾಡುವುದು ಧರ್ಮ. ನೂರಾರು ಮಂದಿಗೆ ಚಿಕಿತ್ಸೆ ನೀಡಿದ ವೈದ್ಯರು ಗುಣಮುಖರಾಗಬೇಕು.ಇದಷ್ಟೇ ನಮ್ಮ ಕಾಳಜಿ. ಅದಕ್ಕಾಗಿ ಹಬ್ಬಕ್ಕಿಂತಲೂ ಮಾನವೀಯ ಸಂಬಂಧಗಳು ಹೆಚ್ಚು ಎಂಬ ಹಿನ್ನಲೆಯಲ್ಲಿ ಅವರಿಗಾಗಿ ಹಣ ಸಂಗ್ರಹ ಮಾಡಿ ನೀಡಲಾಗಿದೆ ಎಂದು ಶೇಕಮಲೆ ಜಮಾತ್ ಮಸೀದಿಯ ಕಾರ್ಯದರ್ಶಿ ಎಸ್.ಪಿ ಬಶೀರ್ ತಿಳಿಸಿದರು.
ಪ್ರಸ್ತುತ ಅನಾರೋಗ್ಯದ ಸಂಕಷ್ಟದಲ್ಲಿ ನಾನು ಇರುವಾಗ ಹಬ್ಬದ ಸಂಭ್ರಮವನ್ನು ಬದಿಗಿಟ್ಟು ನನಗಾಗಿ ಹಣ ಸಂಗ್ರಹಿಸಿ ಮನೆಗೆ ಬಂದು ನೀವು ನೀಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ಅಳಿಲ ಸೇವೆ ಎಂದು ನೀವು ಹೇಳಿದರೂ ನನ್ನ ಪಾಲಿಗೆ ಅತ್ಯಂತ ದೊಡ್ಡ ಶಕ್ತಿಯಾಗಿದೆ. ದೇವರು ನಿಮ್ಮನ್ನು ಖಂಡಿತಾ ಆಶೀರ್ವದಿಸುತ್ತಾನೆ ಎಂದು ಡಾ.ವಿಘ್ನೇಶ್ವರ ಭಟ್ ಈ ಸಂದರ್ಭದಲ್ಲಿ ಹೇಳಿದರು.
ಈ ವೇಳೆ ಜಮಾತ್ ಸದಸ್ಯರುಗಳಾದ ಎಸ್ ಎಂ ಮಹಮ್ಮದ್ ಕುಂಬ್ರ, ಸಲಾಮುದ್ದೀನ್ ಕುಂಬ್ರ, ನಾಸಿರ್ ಕುಂಬ್ರ, ಮಹಮ್ಮದ್ ಬೊಳ್ಳಾಡಿ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಬಶೀರ್ ಕೌಡಿಚ್ಚಾರ್, ರಿಝ್ವಾನ್ ಕೌಡಿಚ್ಚಾರ್, ಮೊಯಿದಿನ್ ಅಲಂಗೂರು, ಅಝರ್ ಕುಂಬ್ರ, ಹಮೀದ್ ಶೇಕಮಲೆ, ಅಮೀನ್ ಕುಂಬ್ರ, ಯೂಸುಫ್ ಮುಡಾಲ, ಹಾಫಿಲ್ ಮುಹಮ್ಮದ್ ಹಾಶಿರ್ ಮತ್ತಿತರರು ಭಾಗವಹಿಸಿದ್ದರು.
ಶೀಘ್ರ ಗುಣಮುಖರಾಗಲಿ..
ಮಾನವನಿಗೆ ಕಷ್ಟ ಮತ್ತು ರೋಗ ಯಾವುತ್ತೂ ಜಾತಿ ಧರ್ಮ ನೋಡಿ ಬರುವುದಿಲ್ಲ. ನಮ್ಮೂರಿನ ವೈದ್ಯರಿಗೆ ಮಾರಕ ಕಾಯಿಲೆ ಬಂದಿದೆ. ಅವರು ಗುಣಮುಖರಾಗಲಿ ಎಂದು ನಾವು ಪ್ರಾರ್ಥನೆ ಮಾಡಿದ್ದೇವೆ. ಸಂಕಷ್ಟದ ಸಮಯದಲ್ಲಿ ನಾವು ಮಾಡಿರುವುದು ಚಿಕ್ಕದೊಂದು ಅಳಿಲಸೇವೆ. ಸಮಾಜದ ಭಾಂದವರು ಜಾತಿ ಧರ್ಮ ಎಂದು ನೋಡದೆ ಆರ್ಥಿಕವಾಗಿ ನೆರವಾಗುವ ಮೂಲಕ ಮಾನವೀಯತೆಗೆ ಒತ್ತು ನೀಡಿದ್ದಾರೆ. ವೈದ್ಯರ ಕಾಯಿಲೆ ಶೀಘ್ರವಾಗಿ ಗುಣವಾಗಲಿ ಎಂಬುವುದಷ್ಟೇ ನಮ್ಮ ಆಶಯ- ಸುಲೈಮಾನ್ ಹಾಜಿ ಅಧ್ಯಕ್ಷರು ಶೇಕಮಲೆ ಜಮಾತ್ ಕಮಿಟಿ ಕುಂಬ್ರ.