
ಸಂಜೆವಾಣಿ ವಾರ್ತೆ
ಹನೂರು.ಮಾ.8:- ತಾಲೂಕಿನ ಶೆಟ್ಟಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ನೀರಿನ ಆಹಾಕಾರ ಉಂಟಾಗಿ ಇಲ್ಲಿನ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರು ಗ್ರಾಮ ಪಂಚಾಯಿತಿ ಪಿ.ಡಿ.ಓ ನೀರಿನ ಸಮಸ್ಯೆ ಬಗೆಹರಿಸುವ ಯಾವುದೇ ಕ್ರಮ ಕೈಗೊಳ್ಳದೆ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಗ್ರಾಮ ಪಂ. ಪಿ.ಡಿ.ಓ ವೈರಮಾಣಿಕ್ಯಂ ಹಾಗೂ ಅಧಿಕಾರಿಗಳು ನೀರಿನ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುವ ಮೂಲಕ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ.
ನೀರು ಗಂಟಿ ಪರಿಶಿಷ್ಟ ಸಮುದಾಯದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಾನೆ ನೀರು ಬಿಡುವಂತೆ ಕೇಳಲು ಹೋದರೆ ಅವರ ಮನೆಯವರು ನಮ್ಮ ಜೊತೆ ಜಗಳಕ್ಕೆ ಬರುತ್ತಾರೆ. ನಮ್ಮ ಗ್ರಾಮದಲ್ಲಿ ಕೆರೆಯ ನೀರನ್ನು ತೆಗೆದುಕೊಳ್ಳಲು ನಮಗೆ ಬಿಡುವುದಿಲ್ಲ ತಾರತಮ್ಯ ಮಾಡುತ್ತಾರೆ ಎಂದು ಶೆಟ್ಟಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಮಹಿಳೆಯರು ಯುವಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ನೀರು ಗಂಟಿಯು ನಮ್ಮ ಪರಿಶಿಷ್ಟ ಬಡಾವಣೆಗೆ ನೀರನ್ನು ಬಿಡು ಎಂದರೆ ಬೋರ್ ನಲ್ಲಿ ನೀರಿಲ್ಲ ಎಂದು ಉದ್ದಟತನದಲ್ಲಿ ಮಾತನಾಡುತ್ತಾರೆ ನೀರು ಗಂಟಿಯ ಸಂಬಂದಿಕರು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರುತ್ತಾರೆ ಆಗಾಗಿ ನೀರು ಗಂಟಿಯನ್ನು ನಮ್ಮ ಸಮುದಾಯದ ವ್ಯಕ್ತಿಯನ್ನು ನೇಮಕ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಶೆಟ್ಟಳ್ಳಿ ಗ್ರಾಮದಲ್ಲಿನ ನೀರಿನ ಸಮಸ್ಯೆಯ ಬಗ್ಗೆ ತಾಲೂಕು ಪಂಚಾಯತ್ ಕಚೇರಿ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ ಪರಿಣಾಮ ತಾಲೂಕು ಕಚೇರಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕವಾಗಿ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಿ ಮುಂದಿನ ದಿನಗಳಲ್ಲಿ ಬೋರ್ ತೆಗೆಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಮಂಗಳಮ್ಮ , ಸುಂದ್ರಮ್ಮ , ಮುನಿಮಾದಮ್ಮ , ದೊಡ್ಡಮ್ಮ , ಸುರೇಶ್ , ವೆಂಕಟೇಶ್, ಶಿವು , ಸಿದ್ದಯ್ಯ , ನಿತ್ಯ , ಬಸವಯ್ಯ , ಸುಷ್ಮ ,ಹಾಗೂ ಇನ್ನು ಮುಂತಾದವರು ಇದ್ದರು.

























