ಸುಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ವತಿಯಿಂದ ಬೃಹತ್ ಹಕ್ಕೊತ್ತಾಯ ಸಭೆ
ಸುಳ್ಯ:ಸನಾತನವಾದ ಧರ್ಮ, ಶೃದ್ಧಾಕೇಂದ್ರಗಳ ಮೇಲೆ ನಿರಂತರ ಅವಹೇಳನ ಆಗುತ್ತಿದೆ. ಇಂತಹ ಕೆಟ್ಟ ಪ್ರಭಾವ ಮುಂದುವರಿದರೆ ಸಮಾಜದ ಏಕತೆಗೆ ಭಂಗ ಉಂಟಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗ ಸುಳ್ಯ ತಾಲೂಕು ಇದರ ವತಿಯಿಂದ ಸೋಮವಾರ ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನಕ್ಕೆ ಖಂಡನೆ ಹಾಗೂ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮದ ಮೇಲೆ ನಿರಂತರ ದಾಳಿಯಾಗುತ್ತಿದೆ. ಬ್ರೀಟಿಷರ ಕಾಲದಲ್ಲಿಯೂ ಒಡೆದು ಆಳುವ ನೀತಿಯಿಂದ ಸನಾತನ ಧರ್ಮದ ಅಸ್ತಿತ್ವಕ್ಕೆ ಭಂಗ ಉಂಟಾಗಿತ್ತು. ಆದರೂ ಸನಾತನ ಉಳಿದಿದೆ. ಧರ್ಮಸ್ಥಳ ಸೇರಿದಂತೆ ಶೃದ್ದಾ ಕೇಂದ್ರಗಳ ಮೇಲೆ ದಾಳಿ ರಾಷ್ಟ್ರವ್ಯಾಪ್ತಿ ಆಗುತ್ತಿದೆ ಎಂದ ಅವರು ನಮ್ಮ ಭಾವನೆಗಳು, ನಂಬಿಕೆಗಳು ಯ್ಯೂಟೂಬ್ ಚಾನೆಲ್‌ಗಳಲ್ಲಿ ಬರುವ ವಿಷಯಗಳಿಗೆ ಅವಲಂಬಿತ ಆಗಬಾರದು. ನಮ್ಮ ಭೌದ್ಧಿಕವಾದ ಶಕ್ತಿ, ಭಾಂಧವ್ಯವನ್ನು ಯ್ಯೂಟೂರ್‌ಗಳಿಗೆ ಮಾರಲು ಹೋಗಬಾರದು ಎಂದರು.
ಸನಾತನ ಧರ್ಮ ಸಂಸ್ಕೃತಿಯ ಮೇಲೆ ಅಪಾರವಾಗಿ ಗೌರವವಿದೆ. ಆದರೆ ಕೆಲವು ಮಾಧ್ಯಮಗಳು ಜನರ ಭಾವನೆಗಳನ್ನು ಅಲ್ಲಾಡಿಸುವ ಕೆಲಸ ಮಾಡುತ್ತಿದೆ. ಇದರ ವಿರುದ್ದ ನಾವು ಎಚ್ಚೆತ್ತುಕೊಳ್ಳಬೇಕು. ಧರ್ಮಸ್ಥಳದ ಧಾರ್ಮಿಕ ಸೇವೆ ಮತ್ತು ಸಮಾಜ ಸೇವೆ ಶ್ಲಾಘನೀಯವಾದದ್ದು, ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳದೇ ಉಳಿಸಿಕೊಳ್ಳೊಣ ಎಂದು ಹೇಳಿದರು.
ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಶ್ರದ್ಧಾ ಕೇಂದ್ರಗಳ ಮೇಲೆ ಅವಹೇಳನ, ಅಪಪ್ರಚಾರ ನಡೆದಾಗ ಮೂಕ ಪ್ರೇಕ್ಷಕರಾಗಿರಬಾರದು. ಕೂಡಲೇ ಅದನ್ನು ಪ್ರತಿಭಟಿಸುವ ಕೆಲಸ ಮಾಡಬೇಕು. ಸಮಾಜಕ್ಕೆ ನೂರಾರು ಉಪಯೋಗಿ ಸೇವೆ ಮಾಡಿದ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಪರ ನಿಲ್ಲುವುದು ಸಮಾಜದ ಕರ್ತವ್ಯ ಎಂದರು.
ಎಂ.ಬಿ.ಫೌಂಢೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಧಾರ್ಮಿಕ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ಮುಖ್ಯ ಭಾಷಣ ಮಾಡಿದರು. ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಶಾರದಾಂಬಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್, ಚೆನ್ನಕೇಶವ ದೇಚಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಕಾರ್ಯದರ್ಶಿ ಅಶೋಕ್ ಪ್ರಭು, ಸಂಚಾಲಕ ಎಂ.ವೆಂಕಪ್ಪ ಗೌಡ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ವಿವಿಧ ಕ್ಷೇತ್ರಗಳ, ಭಜನಾ ಮಂದಿರಗಳ ಸಂಘ ಸಂಸ್ಥೆಗಳ ಪ್ರಮುಖರಾದ ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ, ವೆಂಕಟ್ ವಳಲಂಬೆ, ಲೋಕನಾಥ ಅಮೆಚೂರ್, ಬಿ.ನಾಗಕುಮಾರ್ ಶೆಟ್ಟಿ, ಪಿ.ಕೆ.ಉಮೇಶ್, ವಿಷ್ಣುಕಿರಣ್ ಭಟ್, ದೀಪಕ್ ಕುತ್ತಮೊಟ್ಟೆ ಮಧುಸೂದನ್ ಕೆ., ಕೇಶವ ಕೊಳಲುಮೂಲೆ, ಗಿರಿಧರ ಸ್ಕಂದ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಮಲ್ಲೇಶ್ ಬೆಟ್ಟಂಪಾಡಿ, ಎ.ಕೆ. ಮಣಿಯಾಣಿ, ಐತ್ತಪ್ಪ ರೈ ಅಜ್ಜಂಗಳ ಉಪಸ್ಥಿತರಿದ್ದರು.
ಸವಿತಾ ಸಂದೇಶ್ ಪ್ರಾರ್ಥಿಸಿದರು. ಭಕ್ತಾದಿಗಳ ಬಳಗದ ಪ್ರಧಾನ ಕಾರ್ಯದರ್ಶಿ ಅಶೋಕ್ ಪ್ರಭು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


























